ಸಂಸ್ಕೃತ ಸಾಹಿತ್ಯ

	ಭಾರತೀಯ ಸಾಹಿತ್ಯದ ಅತ್ಯಂತ ಪ್ರಾಚೀನ ಸಾಹಿತ್ಯ. ಇದರ ಆದಿಭಾಗವೇ ವೈದಿಕ ವಾಙ್ಮಯ. ವೇದಗಳ ಭಾಷೆಯನ್ನು ವೈದಿಕ ಸಂಸ್ಕøತವೆಂದೂ ಪಾಣಿನಿಯಿಂದೀಚಿನ ಭಾಷೆಯನ್ನು ಲೌಕಿಕ ಅಥವಾ ಕಾವ್ಯಸ್ಥ ಸಂಸ್ಕøತವೆಂದೂ ವಿಭಜಿಸಲಾಗಿದೆ. ವೈದಿಕ ಸಂಸ್ಕøತವೇ ಮುಂದೆ ಬೆಳವಣಿಗೆಯ ಹಂತಗಳಲ್ಲಿ ಕಾವ್ಯಸಂಸ್ಕøತವಾಗಿ ಪರಿಣಮಿಸಿತು. ವೈದಿಕ ವಾಙ್ಮಯದಿಂದಲೇ ಭಾರತೀಯ ಸಾಹಿತ್ಯ ಚರಿತ್ರೆ ಆರಂಭವಾಗುತ್ತದೆ. ಮುಂದೆ ಹುಟ್ಟಿದ ಎಲ್ಲ ಲೌಕಿಕ-ಧಾರ್ಮಿಕ ಸಾಹಿತ್ಯಗಳೂ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಈ ಸಾಹಿತ್ಯರಾಶಿಗೇ ಸಂಬಂಧಪಟ್ಟಂಥವಾಗಿವೆ. 

	ಸಂಸ್ಕøತ ಸಾಹಿತ್ಯವನ್ನು ಮುಖ್ಯವಾಗಿ ವೇದಗಳಯುಗ, ಇತಿಹಾಸಗಳಯುಗ, ಮಹಾಕಾವ್ಯ ಅಥವಾ ಅಭಿಜಾತಯುಗ ಎಂದು ಮೂರು ಯುಗಗಳಾಗಿ ವಿಂಗಡಿಸಲಾಗಿದೆ. ವೇದ ಸಾಹಿತ್ಯ ಕ್ರಿ.ಪೂ.1400-500ರ ವರೆಗೆ ವ್ಯಾಪಿಸಿದೆ. ಕೆಲವು ವಿದ್ವಾಂಸರು ಈ ಸಾಹಿತ್ಯದ ಉಗಮ ವನ್ನು ಕ್ರಿ.ಪೂ.2000ಕ್ಕೂ ಹಿಂದಿನದೆಂದು ಗುರುತಿಸಿದ್ದಾರೆ. ಇತಿಹಾಸ ಯುಗ ಕ್ರಿ.ಪೂ.500 ಅಥವಾ ಅದಕ್ಕೂ ಹಿಂದಿನದು. ಮಹಾಕಾವ್ಯ ಅಥವಾ ಅಭಿಜಾತಯುಗ ಪ್ರಸಿದ್ಧ ವೈಯ್ಯಾಕರಣಿ ಪಾಣಿನಿಯ ಕಾಲದಿಂದ ಅಂದರೆ ಕ್ರಿ.ಪೂ. 400ರಿಂದ ಆರಂಭಗೊಳ್ಳುತ್ತದೆಂಬುದು ವಿದ್ವಾಂಸರ ಅಭಿಪ್ರಾಯ. 

	ಸಾಹಿತ್ಯ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನವಾದ ವೇದಗಳೇ ಆರಂಭದ ಕಾವ್ಯಗಳೂ ಹೌದು. ಎಲ್ಲ ಧರ್ಮಶಾಸ್ತ್ರಗಳಿಗೂ ಎಲ್ಲ ದರ್ಶನಗಳಿಗೂ ಈ ಸಾಹಿತ್ಯವೇ ಮೂಲ. ವೇದಗಳೆಂದರೆ ಸ್ಥೂಲವಾಗಿ ಜ್ಞಾನಪ್ರತಿಪಾದಕ ಗ್ರಂಥಗಳು (ನೋಡಿ-ವೇದಗಳು). 

	ಇತಿಹಾಸಗಳ ಯುಗದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವಂತಹವು ರಾಮಾಯಣ ಮತ್ತು ಮಹಾಭಾರತಗಳು. ಇವು ಉದ್ಧಾಮ ಇತಿಹಾಸ ಗಳೆನಿಸಿದ್ದರೂ ರಾಮಾಯಣವನ್ನು ಆದಿಕಾವ್ಯ ಎಂದು ಕರೆಯುವುದು ಸಂಪ್ರದಾಯವಾಗಿದೆ. ಈ ಎರಡು ಕೃತಿಗಳೂ “ಯುದ್ಧಪ್ರಧಾನವಾದ ಗ್ರಂಥಗಳಾದರೂ ಇವನ್ನು ಕೇವಲ ರಾಜಕೀಯ ಪಕ್ಷ ಪ್ರತಿಪಕ್ಷಗಳ ಹೋರಾಟವೆಂದಾಗಲಿ, ಧರ್ಮಾಧರ್ಮಗಳ ಸಂಘರ್ಷವೆಂದಾಗಲಿ ಭಾವಿಸುವುದು ತಪ್ಪಾಗುವುದು. ವಾಸ್ತವಿಕವಾಗಿ ನೋಡುವುದಾದರೆ ಇವು ಸಮಸ್ತ ಭಾರತವನ್ನು ವ್ಯಾವಹಾರಿಕ ದೆಶೆಯಲ್ಲಿ ಪ್ರದರ್ಶಿಸುವ ಜೀವಂತವಾದ ಭಾರತೀಯ ಸಂಸ್ಕøತಿಯ ದಿವ್ಯ ಜ್ಯೋತಿಗಳು” ಎಂಬ ಅಭಿಪ್ರಾಯವಿದೆ. ಕಾಲದೃಷ್ಟಿಯಿಂದ ಮಹಾಭಾರತಕ್ಕಿಂತ ರಾಮಾಯಣದ ಕಾಲವೇ ಹಿಂದಿನದು (ಕ್ರಿ.ಪೂ.500); ಸಾಹಿತ್ಯ ದೃಷ್ಟಿಯಿಂದಲೂ ಇದರ ರಚನೆ ಅತ್ಯದ್ಭುತ. ಸಕಲ ಜೀವಿಗಳ ಮೂಲಭೂತ ಆದರ್ಶದ ಅಗತ್ಯತೆ ಗಳು ಇದರಲ್ಲಿ ಅಡಕಗೊಂಡಿವೆ. ಅನಂತರದ ಅರ್ವಾಚೀನ ಕವಿಗಳೂ ನಾಟಕಕಾರರೂ ಆದ ಅಶ್ವಘೋಷ, ಭಾಸ, ಬಾಣ, ಮುರಾರಿ, ಮಾಘ, ಭಾರವಿ ಮೊದಲಾದ ಅನೇಕರಿಗೆ ಆಕರಗ್ರಂಥಗಳಾಗಿರುವುದು ರಾಮಾಯಣ ಮತ್ತು ಮಹಾಭಾರತಗಳ ವೈಶಿಷ್ಟ್ಯ. ಈ ಮಹಾಕಾವ್ಯಗ ಳನ್ನು ಆಧರಿಸಿ ರಚನೆಗೊಂಡ ಸಾಹಿತ್ಯವೂ ವಿಪುಲವಾಗಿದೆ. 

	ಇತಿಹಾಸದಲ್ಲಿ ಪುರಾಣಗಳಿಗೆ ವಿಶೇಷ ಸ್ಥಾನವಿದೆ. ಪ್ರಾಚೀನ ಭಾರತದ ಸಂಸ್ಕøತಿ, ನಾಗರಿಕತೆಗಳು, ವೇದಗಳ ಮಹತ್ತ್ವ ಈ ಎಲ್ಲವನ್ನೂ ಅರಿಯುವಲ್ಲಿ ಪುರಾಣಗಳು, ಅತ್ಯಂತ ಸಹಕಾರಿಗಳಾಗಿವೆ; 18 ಪುರಾಣಗಳು ಪ್ರಸಿದ್ಧವಾಗಿವೆ. ಹಿಂದುಧರ್ಮಕ್ಕೆ ಅನ್ವಯವಾಗುವ ವಿಗ್ರಹಾರಾಧನೆ, ಈಶ್ವರವಾದ, ವಿಶ್ವದೇವೈಕವಾದ, ನಂಬಿಕೆ, ಹಬ್ಬ ಹರಿದಿನ, ವ್ರತೋತ್ಸವಗಳು, ನೀತಿ ನಿಯಮ, ಹಲವಾರು ರಾಜವಂಶಗಳ ಚರಿತ್ರೆ ಎಲ್ಲವನ್ನೂ ಒಳಗೊಂಡಿರುವ ಇವು ಸಂಸ್ಕøತ ಸಾಹಿತ್ಯ ಬೆಳೆವಣಿಗೆಯ ಇತಿಹಾಸದಲ್ಲಿ ಮಹತ್ತ್ವದ ಪಾತ್ರವಹಿಸಿವೆ (ನೋಡಿ-ಅಷ್ಟಾದಶ ಪುರಾಣಗಳು). ಪ್ರಸ್ತುತ ಲೇಖನವನ್ನು ಕಾವ್ಯ ಸಾಹಿತ್ಯ, ಗದ್ಯ ಸಾಹಿತ್ಯ, ನಾಟಕ ಸಾಹಿತ್ಯ, ಕಾವ್ಯಮೀಮಾಂಸೆ, ಛಂದಸ್ಸು ಎಂಬ ಉಪಶೀರ್ಷಿಕೆಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ. 

	ಕಾವ್ಯ ಸಾಹಿತ್ಯ : ಮಹಾಕಾವ್ಯ : ಸಂಸ್ಕøತ ಸಾಹಿತ್ಯದಲ್ಲಿ ಲೌಕಿಕ ಕಾವ್ಯರಚನೆ ಯಾವಾಗ ಆಗಿರಬಹುದೆಂಬುದು ಖಚಿತವಾಗಿ ತಿಳಿದಿಲ್ಲ. ಋಗ್ವೇದ, ಬ್ರಾಹ್ಮಣ, ನಿರುಕ್ತಗಳಲ್ಲಿ ಕಾವ್ಯಗಳಿಗೆ ವಿಷಯಗಳಾಗ ಬಹುದಾದ ಅಂಶಗಳು ಉಪಲಬ್ಧವಿದ್ದರೂ ಅವುಗಳಿಂದ ಕಾವ್ಯಗಳ ಸ್ವರೂಪ, ಲಕ್ಷಣಗಳನ್ನು ತಿಳಿಯಲು ಸಾಧ್ಯವಿರಲಿಲ್ಲ. ಅಲ್ಲಿ ಕಾವ್ಯ ಎಂಬುದು ಗದ್ಯ, ಪದ್ಯ, ಚಂಪೂ, ಗೀತೆ, ನಾಟಕ ಹೀಗೆ ಎಲ್ಲವನ್ನೂ ಒಳಗೊಂಡದ್ದಾಗಿದ್ದು ಈ ಯಾವುದೇ ಪ್ರಕಾರದ ರಚನಕಾರನೂ ಕವಿ ಎನಿಸಿಕೊಳ್ಳುತ್ತಾನೆ. ಕವೇಃಕರ್ಮ ಕಾವ್ಯಂ ಎಂಬುದೇ ಅಲ್ಲಿನ ವ್ಯಾಖ್ಯೆ. ಮಹಾಕಾವ್ಯ ದೇವತಾ ಪ್ರಾರ್ಥನೆಯಿಂದ ಆರಂಭಗೊಳ್ಳಬೇಕು, ಸಾಂಪ್ರದಾಯಿಕ ವಸ್ತು ಹೊಂದಿರಬೇಕು, ಸರ್ಗಗಳಾಗಿ ವಿಭಜಿತವಾಗಿರ ಬೇಕು ಇತ್ಯಾದಿಯಾಗಿ ಲಾಕ್ಷಣಿಕರು ಹೇಳುವ ಮಹಾಕಾವ್ಯದ ಲಕ್ಷಗಳಿಗನುಗುಣವಾದ ಕಾವ್ಯಗಳು ಅಶ್ವಘೋಷ ಮತ್ತು ಕಾಳಿದಾಸರ ಕಾಲದವರೆಗೆ ಉಪಲಬ್ಧವಾಗಿಲ್ಲ. ಅಂದರೆ ಆ ಕಾಲದವರೆಗೆ ಸಂಸ್ಕøತ ಸಾಹಿತ್ಯ ಕೃಷಿ ಸ್ಥಗಿತಗೊಂಡಿತ್ತೆಂಬುದು ಇದರ ಅರ್ಥವಲ್ಲ. ಸಂಸ್ಕøತ ಕಾವ್ಯಪರಂಪರೆಯಲ್ಲಿ ರಾಮಾಯಣದ ಅನಂತರ ಉಪಲಬ್ಧವಿರುವ ಗ್ರಂಥಗಳಲ್ಲಿ ಅಶ್ವಘೋಷನ ಕಾವ್ಯದಿಂದ (1ನೆಯ ಶತಮಾನ) ಲೌಕಿಕ ಕಾವ್ಯ (ಮಹಾಕಾವ್ಯ) ಪರಂಪರೆಯನ್ನು ಗುರುತಿಸಲಾಗಿದೆ. ಅಶ್ವಘೋಷ ಏಳೆಂಟು ಗ್ರಂಥಗಳನ್ನು ಬರೆದಿರುವನೆಂದು ಪ್ರತೀತಿ ಇದ್ದರೂ ಬುದ್ಧಚರಿತ ಮತ್ತು ಸೌಂದರಾನಂದಗಳು ನಿರ್ವಿವಾದವಾಗಿ ಇವನ ಎರಡು ಮಹಾಕಾವ್ಯಗಳೆನಿಸಿವೆ.

(ನೋಡಿ- ಅಶ್ವಘೋಷ)

	ಅಶ್ವಘೋಷನ ಅನಂತರ ನಮಗೆ ಉಪಲಬ್ಧವಾಗಿರುವ ಮಹಾಕಾವ್ಯಗಳು ಕಾಳಿದಾಸನ ರಘುವಂಶ, ಕುಮಾರಸಂಭವಗಳು. ಇವನ ಮೇಘದೂತ, ಋತುಸಂಹಾರಗಳು ಖಂಡ ಕಾವ್ಯಗಳಾಗಿವೆ. ಭಾರತೀಯ ಸಾಹಿತ್ಯದಲ್ಲಿ ರಘುವಂಶದ ಸ್ಥಾನ ಅತ್ಯುನ್ನತವಾದದ್ದು. (ನೋಡಿ- ಕಾಳಿದಾಸ)

	ಬುದ್ಧಘೋಷನ ಪದ್ಯಚೂಡಾಮಣಿ (ಸು.400), ಭೀಮ ಅಥವಾ ಭೌಮಕನ ರಾವಣಾರ್ಜುನೀಯ (ಸು. 500), ಕುಮಾರದಾಸನ ಜಾನಕೀ ಹರಣ (8 ಅಥವಾ 9ನೆಯ ಶತಮಾನ)-ಈ ಮೊದಲಾದ ಕಾವ್ಯಗಳು ಕಾಳಿದಾಸನ ಅನಂತರ ಉಪಲಬ್ಧವಾಗಿವೆ. 

	ಅನಂತರ ಸಂಸ್ಕøತ ಸಾಹಿತ್ಯ ರಾಜಾಶ್ರಯವನ್ನು ಪಡೆದ ಕಾರಣದಿಂದ ಹುಲುಸಾಗಿ ಬೆಳೆಯಲು ಸಾಧ್ಯವಾಯಿತು. ಜನಮೆಚ್ಚುಗೆಯ ದೃಷ್ಟಿಯಿಂದ ಸ್ತುತಿಪ್ರಧಾನವಾದ ವಿದ್ವತ್ ಕಾವ್ಯಗಳು ಆರಂಭಗೊಂಡವು. ಕಾಳಿದಾಸನವ ರೆಗಿನ ಕವಿಗಳ ದೃಷ್ಟಿಕೋನದಲ್ಲಿ ಪ್ರಧಾನವಾಗಿದ್ದ ಪ್ರತಿಭಾವೈಶಿಷ್ಟ್ಯ, ಲೋಕಮರ್ಮ, ಜೀವನ ರಹಸ್ಯಗಳಿಗಿದ್ದ ಮಾನ್ಯತೆ ಗೌಣವಾಯಿತು. ಸ್ಪರ್ಧಾ ಮನೋಭಾವ ಸ್ವಪಾಂಡಿತ್ಯ ಪ್ರದರ್ಶನಗಳು ಹೆಚ್ಚಾದವು. ಭಾವಕ್ಕಿಂತ ಬೌದ್ಧಿಕ ಶಕ್ತಿ ಪ್ರದರ್ಶನ ಹೆಚ್ಚಾಯಿತು. ಇದರ ಫಲವಾಗಿ ಏಕಾಕ್ಷರಿ, ದ್ವ್ಯಕ್ಷರಿ, ಗತಪ್ರತ್ಯಾಗತ, ಚಿತ್ರಬಂಧ, ದ್ವಿಸಂಧಾನ, ತ್ರಿಸಂಧಾನ ಮೊದಲಾದ ಶಬ್ದಪಾಂಡಿತ್ಯವನ್ನು ಪ್ರದರ್ಶಿಸುವ ಬೌದ್ಧಿಕ ಕಾವ್ಯಗಳು ರಚನೆಗೊಂಡವು. ವ್ಯಾಕರಣ, ಅಲಂಕಾರ ಲಕ್ಷಣಗಳಿಗೆ ಲಕ್ಷ್ಯ ಪದ್ಯಗಳ ನ್ನೊಳಗೊಂಡ ಕಾವ್ಯಗಳು ನೀತಿ ಪ್ರತಿಪಾದನೆ, ಶಾಸ್ತ್ರ ಪಾಂಡಿತ್ಯ ಪ್ರದರ್ಶನಗಳನ್ನು ಧ್ಯೇಯವಾಗಿಟ್ಟುಕೊಂಡು ರಚನೆಗೊಂಡ ಕಾವ್ಯಗಳಿಂದ ಕಾವ್ಯವು ಸಂಪ್ರದಾಯಬದ್ಧವಾಗಿ ಪರಿಣಮಿಸಿ ಚರ್ವಿತ ಚರ್ವಣವಾಯಿತು. ಇಂಥ ಸಂದರ್ಭದಲ್ಲಿಯೂ ಸಂಪ್ರದಾಯವನ್ನು ಪಾಲಿಸಿಯೂ ಅದನ್ನು ಮೀರಿ ನವನವೋನ್ಮೇಷಶಾಲಿನಿಯಾಗಿ ಬಹು ಜನಾದರಣೀಯವಾಗಿ ಕಾವ್ಯಗಳನ್ನು ರಚಿಸಿದವರೂ ಇದ್ದಾರೆ. ಭಾರವಿ, ಮಾಘ, ಹರ್ಷ ಮೊದಲಾದ ಕವಿಗಳನ್ನು ಇಲ್ಲಿ ನೆನೆಯಬಹುದು. 

	ಭಾರವಿಯ ಕಿರಾತಾರ್ಜುನೀಯ 18 ಸರ್ಗಗಳಿಂದ ಕೂಡಿದ್ದು ಅರ್ಜುನನು ಪಾಶುಪತವನ್ನು ಪಡೆದ ಭಾರತದ ಕಥಾ ಭಾಗವನ್ನು ವಸ್ತುವಾಗಿ ಹೊಂದಿದೆ. ಕಿರಾತಾರ್ಜುನೀಯ ಹಾಗೂ ಶಿಶುಪಾಲವಧ ಕಾವ್ಯಗಳು ಸಂಸ್ಕøತದ ಪಂಚಮಹಾಕಾವ್ಯಗಳ ಗುಂಪಿಗೆ ಸೇರಿದುವಾಗಿವೆ.

 (ನೋಡಿ- ಭಾರವಿ)

	ಭಟ್ಟಿಕಾವ್ಯ ಎಂದೇ ಪ್ರಸಿದ್ಧವಾಗಿರುವ ಭಟ್ಟಿಕವಿಯ (ಸು.650) ರಾವಣವಧ 22 ಸರ್ಗಗಳನ್ನು ಹೊಂದಿದ್ದು ರಾಮಾಯಣದ ಕಥೆಯನ್ನು ವಸ್ತುವಾಗುಳ್ಳದ್ದು. (ನೋಡಿ- ಭಟ್ಟಿ) ಇವನ ಅನಂತರ ಬರುವ ಕವಿ ಮಾಘ (ಸು. 700). ಇವನ ಶಿಶುಪಾಲವಧ 20 ಸರ್ಗಗಳನ್ನು ಹೊಂದಿದೆ. ಭಾರವಿಯಿಂದ ಪ್ರಾರಂಭವಾದ ಪಾಂಡಿತ್ಯ ಪ್ರದರ್ಶನ, ಚಿತ್ರಕವಿತಾ ಪ್ರಯೋಗಗಳು ಇವನಿಂದ ಅಭಿವೃದ್ಧಿ ಹೊಂದಿತು.
(ನೋಡಿ- ಮಾಘ)

	ಮುಕ್ತಾಕನ, ರತ್ನಾಕರ, ಶಿವಸ್ವಾಮಿ, ಆನಂದವರ್ಧನ ಮೊದಲಾದ ವರು 9ನೆಯ ಶತಮಾನದ ಪ್ರಮುಖ ಕವಿಗಳಾಗಿದ್ದಾರೆ. ಮುಕ್ತಾಕನ ಕೃತಿಯ ಕೆಲವು ಬಿಡಿಪದ್ಯಗಳು ಉಪಲಬ್ಧವಾಗಿವೆ. ರತ್ನಾಕರನ ಹರವಿಜಯ ಅಂಧಕಾಸುರ ವಧೆಯನ್ನು ಕಥಾವಸ್ತುವಾಗಿ ಹೊಂದಿದ್ದು 40,000 ಶ್ಲೋಕಗಳಿಂದಲೂ 50 ಸರ್ಗಗಳಿಂದಲೂ ಕೂಡಿದ ಬೃಹತ್ ಕಾವ್ಯವೆನಿಸಿದೆ. ಮಹಾಕಾವ್ಯ ರಚನೆಯೇ ಇದರ ಮೂಲ ಉದ್ದೇಶ. ಶಬ್ದಾಲಂಕಾರಗಳನ್ನು ಹೊಂದಿರುವುದರೊಂದಿಗೆ ಮಾಘನಲ್ಲಿಲ್ಲದ ಅಪೂರ್ವ ಪದಬಂಧಗಳನ್ನು ರಚಿಸಿರುವುದು ಈ ಕಾವ್ಯದ ವೈಶಿಷ್ಟ್ಯ. ಶಿವಸ್ವಾಮಿ ಏಳು ಮಹಾಕಾವ್ಯಗಳನ್ನು ರಚಿಸಿ ಸೋಲರಿಯದ ವೀರಕವಿ ಎಂಬ ಬಿರುದು ಪಡೆದಿದ್ದಾನೆ. ಇದರೊಂದಿಗೆ 11 ಲಕ್ಷ ಸ್ತೋತ್ರಗಳನ್ನೂ ಹಲವಾರು ನಾಟಕಗಳನ್ನೂ ಬರೆದಿದ್ದರೂ ನಮಗೆ ಉಪಲಬ್ಧವಿರುವ ಏಕೈಕ ಕೃತಿ ಕಪ್ಹಿನಾಭ್ಯುದಯ. ದಕ್ಷಿಣದ ರಾಜನಾಗಿದ್ದ ಕಪ್ಹಿನನು ಬೌದ್ಧಧರ್ಮಕ್ಕೆ ಪರಿವರ್ತಿತನಾದ ವಿಷಯ ಈ ಕೃತಿಯಲ್ಲಿ ವರ್ಣನೆ ಗೊಂಡಿದೆ. ಆನಂದವರ್ಧನ (ನೋಡಿ- ಆನಂದವರ್ಧನ) ಶ್ರೇಷ್ಠ ವಿಮರ್ಶಕನಾಗಿದ್ದರೂ ಸಂಸ್ಕøತ, ಪ್ರಾಕೃತಗಳೆರಡರಲ್ಲಿಯೂ ಕಾವ್ಯವನ್ನು ರಚಿಸಿದ್ದಾನೆ. ಆದರೆ ಇವನ ದೇವೀಶತಕ ಎಂಬ ಕಾವ್ಯಮಾತ್ರ ಲಭ್ಯವಾಗಿದೆ. ಚಿತ್ರಕವಿತ್ವ ಇವನ ವೈಶಿಷ್ಟ್ಯ. 

	ಸುಮಾರು ಇದೇ ಕಾಲದಲ್ಲಿ ಜೈನ ತೀರ್ಥಂಕರ ಚರಿತ್ರೆಯನ್ನೊಳ ಗೊಂಡ ಅನೇಕ ಮಹಾಕಾವ್ಯಗಳು ದೊರೆಯುತ್ತವೆ. ಜಿನಸೇನರ ಹರಿವಂಶ ಅಥವಾ ಆದಿಪುರಾಣ, ಗುಣಭದ್ರರ ಉತ್ತರಪುರಾಣ, ಜಟಾಸಿಂಹ ನಂದಿಯ ವರಾಂಗಚರಿತ, ವಾದಿರಾಜ ಮತ್ತು ಮಾಣಿಕ್ಯಸೂರಿಯ ಯಶೋಧರ ಚರಿತೆಗಳು, ಹರಿಚಂದನ ಧರ್ಮಶರ್ಮಾಭ್ಯುದಯ, ಅಮರಚಂದ್ರನ ಪದ್ಮಾನಂದಕಾವ್ಯ ಮೊದಲಾದ ಕಾವ್ಯಗಳು ಗಮನಾರ್ಹವಾಗಿವೆ. 

	9-10ನೆಯ ಶತಮಾನಗಳಲ್ಲಿಯೂ ಅನೇಕ ಕವಿಗಳು ಮಹಾಕಾವ್ಯಗ ಳನ್ನು ರಚಿಸಿದ್ದಾರೆ. ಅಭಿನಂದನ (ಸು.900. ರಾಜಾಹಾರವರ್ಷನ ಆಸ್ಥಾನಕವಿ ಶತಾನಂದನ ಮಗ) ರಾಮಚರಿತ 36 ಸರ್ಗಗಳ ದೀರ್ಘ ಕಾವ್ಯ. ಇವನ ರಾಘವಪಾಂಡವೀಯ ದ್ವಿಸಂಧಾನ ಕಾವ್ಯ. ಕನಕಸೇನ ವಾದಿರಾಜನ ನಾಲ್ಕು ಸರ್ಗಗಳ ಯಶೋಧರ ಚರಿತೆ (ಸು. 980) ಹಾಗೂ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದ ಹಲಾಯುಧನ ಕವಿರಹಸ್ಯ (ವ್ಯಾಕರಣದ ಧಾತುಪಾಠಕ್ಕೆ ಲಕ್ಷ್ಯಗಳನ್ನೊಳಗೊಂಡ ಕಾವ್ಯ) ಮೊದಲಾದವು. 

	11ನೆಯ ಶತಮಾನದ ಪ್ರಮುಖಕವಿ ಕ್ಷೇಮೇಂದ್ರ. ಇವನು ಹಲವಾರು ಕಾವ್ಯಗಳನ್ನು ಬರೆದಿದ್ದಾನೆ. ರಾಮಾಯಣ ಮಂಜರಿ, ಭಾರತ ಮಂಜರಿ, ಬೃಹತ್‍ಕಥಾಮಂಜರಿ-ಇವು ಇತಿಹಾಸ ಕಥೆಗಳ ಕಾವ್ಯರೂಪದ ಸಂಗ್ರಹ ಗಳು. ಇವನ ಅವಧಾನ ಕಲ್ಪಲತಾ ಕಾವ್ಯ ಬೋಧಿಸತ್ವನ 108 ಅವಧಾನ ಕಥೆಗಳನ್ನು ನಿರೂಪಿಸುತ್ತದೆ. ರಾಜಾವಳಿ ಎಂಬುದು ಐತಿಹಾಸಿಕ ಕಾವ್ಯವಾಗಿದೆ (ನೋಡಿ-ಕ್ಷೇಮೇಂದ್ರ).

	ಮಂಖ ಅಥವಾ ಮಂಖುಕನ ಶ್ರೀಕಂಠಚರಿತ ತ್ರಿಪುರಾಸುರ ಸಂಹಾರವನ್ನು ಕಾವ್ಯವಸ್ತುವಾಗಿ ಹೊಂದಿರುವ ಮಹಾಕಾವ್ಯ. ಇದು 25 ಸರ್ಗಗಳನ್ನು ಹೊಂದಿದೆ. ಇವನು ಕಾಶ್ಮೀರದ ರಾಜಾ ಜಯಸಿಂಹನ (1129-50) ಆಶ್ರಯದಲ್ಲಿದ್ದ. ವಾಗ್ಭಟನ ನೇಮಿ ನಿರ್ವಾಣಕಾವ್ಯ ಹಾಗೂ ಸಂಧ್ಯಾಕರ ನಂದಿಯ ರಾಮಪಾಲಚರಿತೆಗಳೂ (ದ್ವಿಸಂಧಾನ ಕಾವ್ಯ) ಈ ಕಾಲದವೇ. ಕಾವ್ಯ, ವ್ಯಾಕರಣ, ದರ್ಶನಗಳಿಗೆ ಸಂಬಂಧಪಟ್ಟಂತಹ ಅನೇಕ ಕೃತಿಗಳನ್ನು ರಚಿಸಿದ ಲೀಲಾಶುಕನೂ (ಬಿಲ್ವಮಂಗಲನೆಂದೂ ಕರೆಯಲಾಗಿದೆ) ಈ ಕಾಲಕ್ಕೇ ಸೇರುತ್ತಾನೆ. ಹೇಮಚಂದ್ರನ ತ್ರಿಷಷ್ಠಿ ಶಲಾಕಾ ಪುರುಷಚರಿತೆ ಹಾಗೂ ದ್ವಾಶ್ರಯಕಾವ್ಯ ಗ್ರಂಥಗಳು ಇದೇ ಕಾಲದವು. ಸಂಸ್ಕøತ ಹಾಗೂ ಪ್ರಾಕೃತ ಸರ್ಗಗಳೆರಡೂ ಈ ಕಾವ್ಯದಲ್ಲಿ ಇರುವುದರಿಂದ ಈ ಹೆಸರು ಇದೆ. ಈ ಕೃತಿಗೆ ಕುಮಾರಪಾಲ ಚರಿತೆ ಎಂಬ ಮತ್ತೊಂದು ಹೆಸರಿದೆ. ಕಾಮದೇವನ (1182-97) ಆಶ್ರಯದಲ್ಲಿದ್ದ ಕವಿರಾಜನ ರಾಘವಪಾಂಡವೀಯ ಹಾಗೂ ಪಾರಿಜಾತಹರಣ; ಶ್ರೀಹರ್ಷನ ನೈಷದಕಾವ್ಯ; ಚಂಡಕವಿಯ (ಸು. 1200) ಪೃಥ್ವಿರಾಜವಿಜಯ, ಕೃಷ್ಣಾನಂದನ ಸಹೃದಯಾನಂದ, ಜಯರಥನ ಹರಿಚರಿತ ಚಿಂತಾಮಣಿ, ಅಭಯದೇವನ ಜಯಂತದೇವ ವಿಜಯ, ವೀರಧವಳನ (ಸು.1220) ಮಂತ್ರಿ ವಸ್ತುಪಾಲನ ಆಶ್ರಯದಲ್ಲಿದ್ದ ಅರಿಸಿಂಹನ ಸುಕೃತಿ ಸಂಕೀರ್ತನ, ಬಾಲಚಂದ್ರಸೂರಿಯ ವಸಂತ ವಿಲಾಸ, ಸೋಮೇಶ್ವರನ ಸುರಥೋತ್ಸವ, ಅಮರಚಂದ್ರನ ಬಾಲಭಾರತ, ದೇವಪ್ರಭ ಸೂರಿಯ ಪಾಂಡವಚರಿತ, ಚಂದ್ರಪ್ರಭ ಸೂರಿಯ ಪ್ರಭಾವಿಕ ಚರಿತೆ, ಸರ್ವಾನಂದನ ಜಗದೂ ಚರಿತ, ನಯಚಂದ್ರನ (ಸು. 1310), ಹಮ್ಮೀರಕಾವ್ಯ ಮೊದಲಾದವು 12-13ನೆಯ ಶತಮಾನದ ಗಮನಾರ್ಹ ಕಾವ್ಯಗ್ರಂಥಗಳಾಗಿವೆ. 

	13ನೆಯ ಶತಮಾನದ ಉತ್ತರಾರ್ಧದಲ್ಲಿ ಕಂಡುಬರುವ ಪರಮೇಶ್ವರಭಟ್ಟನ  ಹರಿಚರಿತ; ವೆಂಕಟನಾಥನ (ವೇದಾಂತದೇಶಿಕ) ಹಂಸಸಂದೇಶ, ಯಾದವಾಭ್ಯುದಯ, ಸುಭಾಷಿತನೀತಿ  ಮೊದಲಾದ ಕಾವ್ಯಗಳು ಅತ್ಯಂತ ಗಮನಾರ್ಹವಾಗಿವೆ. ವೆಂಕಟನಾಥ ಸು. 120 ಗ್ರಂಥಗಳನ್ನು ಬರೆದಿರುವನೆಂದು ಪ್ರತೀತಿ. ನಾಟಕ, ಮೀಮಾಂಸೆ, ಕಾವ್ಯ, ವ್ಯಾಕರಣ, ತರ್ಕ ಹೀಗೆ ಎಲ್ಲ ವಿಷಯಗಳನ್ನೂ ಇವನ ಕೃತಿಗಳು ಒಳಗೊಂಡಿವೆ. 

	ವಿಜಯನಗರದ ಸ್ಥಾಪನೆಯ ಅನಂತರ ರಚನೆಗೊಂಡು ಉಪಲಬ್ಧವಾಗಿ ರುವ ಪ್ರಮುಖ ಕಾವ್ಯಕೃತಿಗಳಿವು: ಭೋಗನಾಥನ ರಾಮೋಲ್ಲಾಸ, ತ್ರಿಪುರ ವಿಜಯ, ಶೃಂಗಾರ ಮಂಜರಿ, ಅಗಸ್ತ್ಯನ ಪ್ರತಾಪರುದ್ರಯ ಶೋಭೂಷಣ, ನಳಕೀರ್ತಿ ಕೌಮುದಿ, ಕೃಷ್ಣಚರಿತ, ಬುಕ್ಕನ ಮಗ ಕಂಪಣನ ಪತ್ನಿ ಗಂಗಾದೇವಿಯ ವೀರಕಂಪರಾಯಚರಿತ, ಲೋಲಂಬನ ಹರಿವಿಲಾಸ, ವಾಮನಭಟ್ಟ ಬಾಣನ (14ನೆಯ ಶತಮಾನ) ರಘುನಾಥಾಭ್ಯುದಯ, ನಳಾಭ್ಯುದಯ.

	ಯಮಕ ಕವಿ ವಾಸುದೇವನ ಯುಧಿಷ್ಠಿರವಿಜಯ, ನಳೋದಯ, ಶೌರಿಕಥಾ ಮತ್ತು ತ್ರಿಪುರದಾಹ ಕಾವ್ಯಗಳು 15ನೆಯ ಶತಮಾನದ ಕಾವ್ಯಗಳಾಗಿವೆ. ಈ ಕಾಲದಲ್ಲಿಯೇ ಬರುವ ಸುಕುಮಾರಿ ಕವಿಯ ಕೃಷ್ಣ ವಿಲಾಸ, ರಾಜನಾಥನ (1540) ಅಚ್ಯುತರಾಯಾಭ್ಯುದಯ ಮುಖ್ಯ ಕಾವ್ಯಗ್ರಂಥಗಳಾಗಿವೆ.

	ರಾಮಚಂದ್ರನ (ಸು. 1547) ಭಿಕ್ಷಾಟನ ಕಾವ್ಯ, ರುದ್ರಕವಿಯ ರಾಷ್ಟ್ರೌಧವಂಶ ಮಹಾಕಾವ್ಯ, ಚಿದಂಬರನ (ಸು. 1600) ರಾಘವಪಾಂಡವ ಯಾದವೀಯ (ಇದು ರಾಮಾಯಣ, ಭಾರತ, ಭಾಗವತ ಕಥೆಗಳ ಸಮ್ಮಿಳಿತವಾಗಿದೆ). ಹಾಗೆಯೆ ರಾಮ, ಕೃಷ್ಣ, ವಿಷ್ಣು, ಶಿವ ಮತ್ತು ಸುಬ್ರಹ್ಮಣ್ಯರ ವಿವಾಹ ವಿಷಯವನ್ನೊಳಗೊಂಡ ಪಂಚಕಲ್ಯಾಣ, ಯಜ್ಞನಾರಾಯಣ ದೀಕ್ಷಿತನ (ಸು. 1620) ರಘುನಾಥ ಭೂಪ ವಿಜಯ ಅಥವಾ ಸಾಹಿತ್ಯ ರತ್ನಾಕರ; ರಾಮಭದ್ರಾಂಬೆಯ ರಘುನಾಥಾಭ್ಯುದಯ; ರಾಜ ಚೂಡಾಮಣಿ ದೀಕ್ಷಿತನ ರುಕ್ಮಿಣೀ ಕಲ್ಯಾಣ; ಚಕ್ರಕವಿಯ ಜಾನಕೀ ಪರಿಣಯ; ನೀಲಕಂಠ ದೀಕ್ಷಿತನ (ಸು. 1613) ಶಿವಲೀಲಾರ್ಣವ, ಗಂಗಾವತರಣ, ವೆಂಕಟಾಧ್ವರಿಯ ರಾಘವ ಪಾಂಡವೀಯ ವಿಶ್ವಗುಣಾದರ್ಶ ಚಂಪೂ; ಮೇಘವಿಜಯಗಣಿಯ (ಸು. 1631) ಸಪ್ತಸಂಧಾನ ಮಹಾಕಾವ್ಯ ಇದರಲ್ಲಿ ವೃಷಭನಾಥ, ಶಾಂತಿನಾಥ, ಪಾಶ್ರ್ವನಾಥ, ನೇಮಿನಾಥ, ಮಹಾವೀರ, ಕೃಷ್ಣ, ಬಲರಾಮರ ವೈಭವ ವರ್ಣಿತವಾಗಿರುವುದು ವೈಶಿಷ್ಟ್ಯವಾಗಿದೆ. ಶ್ಲೇಷಭೂಯಿಷ್ಠವಾದ ಶಬ್ದಪ್ರಯೋಗದ ಅತಿಗಾಢತೆ ಇಲ್ಲಿದೆ. ದೇವಾನಂದಾಭ್ಯುದಯ, ಶಾಂತಿನಾಥ ಚರಿತೆ ಎಂಬ ಇವನ ಎರಡು ಕೃತಿಗಳು ಮಾಘನ ಕಾವ್ಯಗಳ ಅನುವಾದಗಳಾಗಿವೆ. ಅಕ್ಬರನಿಂದ ಜಗದ್ಗುರು ಎಂದು ಸನ್ಮಾನಗೊಂಡ ಹೀರಾವಿಜಯಸೂರಿಯ ಚರಿತ್ರೆ ಇವನ ಹೀರಾ ಸೌಭಾಗ್ಯ ಕೃತಿಯ ವಸ್ತು. ರಾಮಚಂದ್ರ ದೀಕ್ಷಿತನ ಪತಂಜಲಿ ಚರಿತ; ವಾಸುದೇವನ ರಾಮಕಥೆ, ರಾಮವರ್ಮ ದೀಕ್ಷಿತನ ರುಕ್ಮಿಣೀ ಸ್ವಯಂವರ-ಈ ಮೊದಲಾದ ಗಮನಾರ್ಹ ಕಾವ್ಯಗಳು 16-17ನೆಯ ಶತಮಾನದಲ್ಲಿ ರಚನೆಗೊಂಡಿವೆ. 

	18ನೆಯ ಶತಮಾನದಲ್ಲಿ ಹರದತ್ತ ಸೂರಿಯ ರಾಘವ ನೈಷದೀಯ ಎಂಬ ದ್ವಿಸಂಧಾನ ಕಾವ್ಯ ಮುಖ್ಯವಾಗುತ್ತದೆ. 19ನೆಯ ಶತಮಾನ ದಿಂದೀಚೆಗೆ ರಾಜಾಶ್ರಯ ತಪ್ಪಿದ ಸಂಸ್ಕøತ ಸಾಹಿತ್ಯದ ಚಲನೆಯ ಗತಿ ಮಂದವಾಯಿತು. ದೇಶೀಯ ರಾಜರ ಪೋಷಣೆಯಲ್ಲಿ ಕೆಲವು ಕಾವ್ಯಗಳು ರಚನೆಗೊಂಡಿದ್ದರೂ ಅಷ್ಟು ಪ್ರಸಿದ್ಧಿ ಪಡೆದಿಲ್ಲ. 

	ಒಟ್ಟಾರೆಯಾಗಿ ಆದಿಕಾಲದಲ್ಲಿ ಪ್ರತಿಭಾವಂತ ಕವಿಗಳಿಂದ ಅತಿ ಪ್ರಚಾರವನ್ನು ಕಂಡ ಮಹಾಕಾವ್ಯ ಕಾಲಕ್ರಮೇಣ ಸಾಂಪ್ರದಾಯಿಕತೆಯನ್ನು ಮೈಗೂಡಿಸಿಕೊಂಡು ವಿದ್ವತ್ ಸಭೆಗಳ ಮುಂದೆ ಕೇವಲ ಪಾಂಡಿತ್ಯ ಪ್ರದರ್ಶನದ ಗುರಿಯನ್ನು ಹೊಂದಿ ಇಳಿಮುಖವಾಯಿತು. ಪ್ರಾರಂಭದಲ್ಲಿ ಉತ್ತರಭಾರತವನ್ನು ಜನ್ಮಭೂಮಿಯಾಗಿ ಹೊಂದಿದ್ದ ಸಂಸ್ಕøತ ನಿಧಾನವಾಗಿ ದಕ್ಷಿಣಕ್ಕೂ ಹರಡಿ ಪಲ್ಲವ, ಚೇರ, ಚೋಳ, ಪಾಂಡ್ಯ, ಚಾಳುಕ್ಯ, ವಿಜಯನಗರದ ಅರಸುಗಳೂ ತಂಜಾವೂರು, ಮಧುರೆ, ಮೈಸೂರು, ಮಲಬಾರ್ ಅರಸರೂ - ಈ ಎಲ್ಲ ರಾಜಮನೆತನಗಳ ಆಶ್ರಯ ಮತ್ತು ಪ್ರೋತ್ಸಾಹಗಳಿಂದ ನಾನಾ ಮುಖವಾಗಿ ಬೆಳೆಯಲು ಸಹಾಯವಾಯಿತು. 

	ಲಘುಕಾವ್ಯಗಳು : ಸಂಸ್ಕøತ ಸಾಹಿತ್ಯದ ಲಘುಕಾವ್ಯಗಳೂ ಮಹಾಕಾವ್ಯ ಗಳಷ್ಟೇ ಪ್ರಮುಖವಾದುವು ಇವುಗಳನ್ನು ಖಂಡಕಾವ್ಯಗಳೆಂದೂ ಹೆಸರಿಸಲಾಗಿದೆ. ಇವು ಮುಖ್ಯವಾಗಿ ನೈತಿಕ ಮತ್ತು ಉಪದೇಶಾತ್ಮಕ ಕಾವ್ಯಗಳಾಗಿವೆ. ಈ ಗುಂಪಿನಲ್ಲಿ ಭಾವಗೀತೆ, ಭಕ್ತಿಗೀತೆಗಳೂ ಸೇರುತ್ತವೆ. 

	ಸಂಸ್ಕøತದ ಭಾವಗೀತೆಗಳು ವಾದ್ಯವಿಶೇಷಗಳ ನೆರವಿನಿಂದ ಹಾಡಲು ಯೋಗ್ಯವಾಗಿದ್ದು ಪ್ರೇಮ, ಸುಖ, ದುಃಖ, ಭಕ್ತಿ ಮೊದಲಾದ ಹಲವಾರು ಭಾವಗಳನ್ನು ಹೊರಹೊಮ್ಮಿಸುತ್ತ ಇಂಗ್ಲಿಷ್ ಲಿರಿಕ್ಸ್ ಮಾದರಿಗಳನ್ನು ನೆನಪಿಸುತ್ತವೆ. ಇದರ ರಚನೆ ಏಕ ಶ್ಲೋಕದಿಂದ ಅನೇಕ ಶ್ಲೋಕಗಳ ವರೆಗೆ ವ್ಯಾಪಿಸಿದೆ. ಈ ಬಗೆಯ ಸಂಸ್ಕøತ ಭಾವಗೀತೆಗಳು ದೇಶೀಯ ಭಾಷೆಗಳಷ್ಟೇ ಅಲ್ಲದೆ ಪಾಶ್ಚಾತ್ಯ, ಜರ್ಮನ್ ಮೊದಲಾದ ಸಾಹಿತ್ಯಗಳ ಮೇಲೂ ಅತ್ಯಂತ ಪ್ರಭಾವ ಬೀರಿವೆ. ಈ ಬಗೆಯ ಲಘುಕಾವ್ಯಗಳ ಮೂಲವನ್ನೂ ವೇದ, ರಾಮಾಯಣಗಳಲ್ಲಿ ಗುರುತಿಸಲಾಗಿದೆ. 

	ಶೃಂಗಾರ ಮತ್ತು ಪ್ರಣಯಗೀತೆಗಳು ಅನೇಕ ಬಗೆಯಾಗಿವೆ. ಇವುಗಳಲ್ಲಿ ಸಂದೇಶ ರೀತಿಯ ಕಾವ್ಯಗಳು ಹೆಚ್ಚು ಪ್ರಸಿದ್ಧ. ಸಂದೇಶ ಕಾವ್ಯಗಳಲ್ಲಿ ಮುಖ್ಯ ಕಾವ್ಯಗಳಿವು: ಕಾಳಿದಾಸನ ಮೇಘಸಂದೇಶ (ಮೇಘದೂತ)-ಈ ಕಾವ್ಯ ವಿಶ್ವಮಾನ್ಯತೆ ಗಳಿಸಿ ಜರ್ಮನಿಯ ಷಿಲ್ಲರ್‍ನ ಮೇರಿಯಾ ಸ್ಟುವರ್ಟ್ ಗೀತೆಗೆ ಮಾದರಿಯೆನಿಸಿದೆ. ಮುಂದೆ ಬಂದ ಎಲ್ಲ ಸಂದೇಶ ಕಾವ್ಯಗಳ ಮೇಲೂ ಕಾಳಿದಾಸನ ಪ್ರಭಾವವನ್ನು ಗುರುತಿಸಬಹುದು. ಧೋಯಿ ಕವಿಯ ಪವನ ದೂತ (104 ಶ್ಲೋಕಗಳು), ಸು.1400ರಲ್ಲಿ ಬರುವ ಉದ್ದಂಡ, ಉದಯ ಮತ್ತು ವಾಮನಭಟ್ಟಬಾಣ ರಿಂದ ಕ್ರಮವಾಗಿ ರಚನೆಗೊಂಡಿರುವ ಕೋಕಿಲ ಸಂದೇಶ, ಮಯೂರ ಸಂದೇಶ ಮತ್ತು ಹಂಸ ಸಂದೇಶ ಕಾವ್ಯಗಳೂ ಸು.1500ರಲ್ಲಿ ರಚನೆಗೊಂಡಿರುವ ರೂಪಗೋಸ್ವಾಮಿಯ ಹಂಸ ಸಂದೇಶ ಹಾಗೂ ಉದ್ಭವ ಸಂದೇಶ, ಪರಮೇಶ್ವರನ ಚಕೋರಿ ಸಂದೇಶ, ಸು. 1705ರಲ್ಲಿ ರಚನೆಗೊಂಡ ಶತಾವಧಾನಿ ಕೃಷ್ಣದೇವನ ಭೃಂಗದೂತ, 19ನೆಯ ಶತಮಾನದಲ್ಲಿ ಮೈಸೂರಿನ ರಾಮಾಶಾಸ್ತ್ರಿ ರಚಿತ ಮೇಘ ಪ್ರತಿಸಂದೇಶ, ವಿಷ್ಣುತ್ರಾತನ ಕೋಕ ಸಂದೇಶ; ವಾಸುದೇವನ ಭೃಂಗಸಂದೇಶ, ವಿನಯಪ್ರಭನ ಚಂದ್ರದೂತ, ವಿಷ್ಣುದಾಸನ ಮನೋದೂತ; ಘಟಕರ್ಪರನ ಘಟಕರ್ಪರ ಮೊದಲಾದವು ಪ್ರಸಿದ್ಧವಾಗಿವೆ. ಸಂದೇಶಕಾವ್ಯಗಳಲ್ಲಿ ಶ್ಲೋಕಗಳಲ್ಲದೆ ವಿವಿಧ ವೃತ್ತಗಳೂ ಪ್ರಯೋಗಗೊಂಡಿವೆ. 

	ಸಂದೇಶರೀತಿಯ ಕಾವ್ಯಗಳಿಂದ ಹೊರತಾದ ಲಘುಕಾವ್ಯಗಳಲ್ಲಿ ಕಾಳಿದಾಸನ ಋತುಸಂಹಾರ ಅಗ್ರಸ್ಥಾನ ಗಳಿಸಿದೆ. ಪ್ರಣಯ ವಸ್ತುವುಳ್ಳ ಶೃಂಗಾರತಿಲಕ, ಪುಷ್ಪಬಾಣವಿಲಾಸ, ರಾಕ್ಷಸಕಾವ್ಯ-ಈ ಕಾವ್ಯಗಳ ಕರ್ತೃ ಕಾಳಿದಾಸನೇ ಇರಬೇಕೆಂದು ಪ್ರತೀತಿ. ಈ ಬಗೆಯ ಕಾವ್ಯಗಳಲ್ಲಿ ಅಮರುಕವಿಯ ಅಮರಶತಕ, ಭರ್ತೃಹರಿಯ ಶೃಂಗಾರಶತಕ, ಬಿಲ್ಹಣನ ಚೋರ ಪಂಚಶಿಕಾ, ಜಯದೇವನ ಗೀತಗೋವಿಂದ ಮೊದಲಾದ ಕಾವ್ಯಗಳು ಗಮನಾರ್ಹವೆನಿಸಿವೆ.
	ಲಘುಕಾವ್ಯ ಅಥವಾ ಗೀತ ಸಾಹಿತ್ಯದಲ್ಲಿ ಭಕ್ತಿಗೀತೆಗಳೂ ಪ್ರಧಾನ ಸ್ಥಾನ ಗಳಿಸಿವೆ. ಆಧ್ಯಾತ್ಮ ಸಾಧನೆ ಈ ಗೀತೆಗಳ ಹಿನ್ನೆಲೆ. ಈ ಗೀತೆಗಳು ಸಾಮಾನ್ಯವಾಗಿ ಪಂಚಕ, ಅಷ್ಟಕ, ದಶಕ, ಪಂಚಾಶಿಕ, ಶತಕ ಮೊದಲಾದ ಸಂಖ್ಯಾತ್ಮಕ ನಿರ್ದೇಶಕಗಳಿಂದ ಕೂಡಿರುತ್ತವೆ. ಇವು ಹಾಡಲು ಯೋಗ್ಯವಾದ ದಂಡಕಗಳಾಗಿಯೂ ಗದ್ಯಗಳಾಗಿಯೂ ರಚನೆಗೊಂಡಿರಬಹುದು. ವಿದ್ವಾಂಸರು ಗುರುತಿಸಿರುವಂತೆ ಇವುಗಳ ಮೂಲ ವೇದಗಳೇ ಆಗಿದೆ. ಇಂಥ ಅಸಂಖ್ಯಾತ ರಚನೆಗಳಿವೆ. ಕೆಲವು ಪ್ರಸಿದ್ಧ ಕೃತಿಗಳನ್ನು ಇಲ್ಲಿ ಹೆಸರಿಸಲಾಗಿದೆ. ಕಾಳಿದಾಸನದೆಂದು ಪ್ರತೀತಿಯಿರುವ ಶ್ಯಾಮಲಾದಂಡಕ, ಅಶ್ವಘೋಷನ ಗಂಡೀಸ್ತೋತ್ರಗಾಥಾ, ಸಿದ್ಧಸೇನ ದಿವಾಕರನ ಕಲ್ಯಾಣ ಮಂದಿರ ಸ್ತೋತ್ರ, ಶ್ರೀಹರ್ಷನ ಸುಪ್ರಭಾತ ಸ್ತೋತ್ರ, ಬಾಣನ ಚಂಡೀಶತಕ, ಸರ್ವಜ್ಞಮಿತ್ರನ ತಾರಾಸ್ತೋತ್ರ, ಶಂಕರಾಚಾರ್ಯರ ಅನ್ನಪೂರ್ಣಾದಶಕ, ಕನಕಧಾರಾಸ್ತೋತ್ರ, ರಾಮಭುಜಂಗಸ್ತೋತ್ರ, ಶಿವಭುಜಂಗಸ್ತೋತ್ರ, ಸೌಂದರ್ಯ ಲಹರಿ, ವೈಷ್ಣವ ಆಳ್ವಾರುಗಳಲ್ಲೊಬ್ಬರಾದ ಕುಲಶೇಖರರ ಮುಕುಂದ ಮಾಲೆ; ರತ್ನಾಕರನ ವಕ್ರೋಕ್ತಿ ಪಂಚಶಿಖಾ, ಆನಂದ ವರ್ಧನನ ದೇವೀಶತಕ; ಯಾಮುನಾಚಾರ್ಯರ ಚತುಶ್ಲೋಕಿ, ಶ್ರೀವತ್ಸಾಂಕನ ಶ್ರೀಸ್ತವ, ವೈಕುಂಠಸ್ತವ, ಮೊದಲಾದ ಪಂಚಸ್ತವಗಳು; ಪರಾಶರಭಟ್ಟರ ಶ್ರೀಗುಣರತ್ನಕೋಶ ಮತ್ತು ಶ್ರೀರಂಗರಾಜಸ್ತವಗಳು; ಜಯದೇವನ ಗಂಗಾಸ್ತವ; ಕೃಷ್ಣಲೀಲಾ ಶುಕನ, ಶ್ರೀಕೃಷ್ಣಕರ್ಣಾಮೃತ, ಮಧ್ವಾಚಾರ್ಯರ ದ್ವಾದಶಸ್ತೋತ್ರ, ವೇದಾಂತದೇಶಿಕರ ಪಾದುಕಾಸಹಸ್ರ, ರಘುವೀರಗದ್ಯ, ಅಚ್ಯುತಶತಕ, ದಯಾಶತಕ, ವರದರಾಜಸ್ತವ ಮೊದಲಾದವು; ಕವಿ ವೃಷಭನ ನಾರಾಯಣೀಯ, ಮಧುಸೂದನಸರಸ್ವತಿಯ ಆನಂದ ಮಂದಾಕಿನಿ, ರೂಪಗೋಸ್ವಾಮಿಯ ಮುಕುಂದ ಮುಕ್ತಾವಳಿ, ಜಗನ್ನಾಥ ಪಂಡಿತನ ಸುಧಾಲಹರಿ, ಅಮೃತಲಹರಿ ಮೊದಲಾದವು; ನೀಲಕಂಠ ದೀಕ್ಷಿತನ  ಆನಂದ ಸಾಗರಸ್ತವ, ವೆಂಕಟಾಧ್ವರಿಯ ಲಕ್ಷ್ಮೀ ಸಹಸ್ರ, ರಾಮಭದ್ರ ದೀಕ್ಷಿತನ ರಾಮಬಾಣಸ್ತವ, ನಾರಾಯಣ ತೀರ್ಥರ ಕೃಷ್ಣಲೀಲಾ ತರಂಗಿಣಿ. ಇದೇ ಗುಂಪಿಗೆ ತ್ಯಾಗರಾಜ ಭಾಗವತ, ಮುತ್ತುಸ್ವಾಮಿ ದೀಕ್ಷಿತ ಹಾಗೂ ಶ್ಯಾಮಾಶಾಸ್ತ್ರಿಗಳ ಕೃತಿಗಳನ್ನೂ ಸೇರಿಸಬಹುದು.

	ನೈತಿಕ ಕಾವ್ಯಗಳ ರಚನೆ ಬಹಳ ಪ್ರಾಚೀನಕಾಲದಿಂದ ಬೆಳಕಿಗೆ ಬಂದಿದೆ. ಧರ್ಮ ಮತ್ತು ತತ್ತ್ವಗಳ ನಿರೂಪಣೆ ಇವುಗಳ ಮೂಲ ಉದ್ದೇಶ. ಜನ್ಮಾಂತರಗಳ ಫಲವಾಗಿ ಉಂಟಾಗುವ ಸುಖದುಃಖಗಳು, ದುಃಖನಿವಾರಣೆಗೆ ಅನುಸರಿಸಬೇಕಾದ ಮಾರ್ಗ, ಸದ್ಗುಣ ದುರ್ಗುಣಗಳ ಬೆಲೆ, ಶಿಷ್ಟ ಮತ್ತು ದುಷ್ಟರ ಪ್ರಭಾವ, ಸಮಾಜದ ಯೋಗ್ಯ ಜೀವನಕ್ಕೆ ಅಗತ್ಯವಾದ ಕರುಣೆ, ದಯೆ, ಸಹಾನುಭೂತಿ, ಸಹಿಷ್ಣುತೆ, ತ್ಯಾಗ ಮೊದಲಾದ ನಡತೆಯ ವಿವಿಧ ಮಜಲುಗಳನ್ನು ಇಲ್ಲಿ ನಿರೂಪಿಸಲಾಗಿದೆ. ಈ ಬಗೆಯ ಕಾವ್ಯಗಳಿಗೆ ಋಗ್ವೇದ ಮತ್ತು ಐತರೇಯ ಬ್ರಾಹ್ಮಣಗಳು ಮೂಲ ಎಂದು ಗುರುತಿಸಲಾಗಿದೆ. ಇವು ರಚನೆಯಲ್ಲಿ ಗೀತಿಕೆಗಳಂತೆ ಭಿನ್ನ ಸ್ವರೂಪದವಾದರೂ ಒಂದು ಪದ್ಯದವೂ ಒಂದು ಸ್ವತಂತ್ರಗ್ರಂಥದ ಆಕಾರದವೂ ಆಗಿರಬಹುದು. ಚಾಣಕ್ಯನ ಚಾಣಕ್ಯ ಶತಕ ಈ ನಿಟ್ಟಿನ  ಮೊದಲ ಕಾವ್ಯವೆನ್ನಲಾಗಿದೆ. ಇದು ಸು.300 ಪದ್ಯಗಳನ್ನು ಹೊಂದಿದೆ. ರಾಜನೀತಿ ಚಾಣಕ್ಯ, ವೃದ್ಧಚಾಣಕ್ಯ ಎಂಬ ಕೃತಿಗಳು ಇವನವೇ ಎನ್ನಲಾಗಿದೆ. ಸುಂದರ ಪಾಂಡ್ಯನ ನೀತಿದ್ವಿಷಷ್ಠಿಕಾ, ಶಾಂತಿದೇವಮನ ಬೋಧಿ ಸತ್ವಾವತಾರ, ಶಿಕ್ಷಾಸಮುಚ್ಚಯ, ಸೂತ್ರಸಮುಚ್ಚಯ; ಭರ್ತೃಹರಿಯ ನೀತಿಶತಕ, ವೈರಾಗ್ಯಶತಕಗಳು, ಘಟಖರ್ಪನ ನೀತಿಸಾರ; ವರರುಚಿಯ ನೀತಿರತ್ನ, ವೇತಾಲಭಟ್ಟನ ನೀತಿ ಪ್ರದೀಪ, ಶಂಕರಾಚಾರ್ಯರ ಭಜಗೋವಿದಂ, ಅಮಿತಗತಿಯ ಸುಭಾಷಿತ ರತ್ನ ಸಂದೋಹ, ಧರ್ಮ ಪರೀಕ್ಷೆ; ಕ್ಷೇಮೇಂದ್ರನ ಚಾರುಚರ್ಯ, ಚತುರ್ವರ್ಗ ಸಂಗ್ರಹ; ಹೇಮಚಂದ್ರನ ಯೋಗಶಾಸ್ತ್ರ; ಜಲ್ಹಣನ ಮುಗ್ಧೋಪದೇಶ; ಸಿಲ್ಹಣನ ಶಾಂತಿಶತಕ; ವೇದಾಂತ ದೇಶಿಕರ ಸುಭಾಷಿತ ನೀವಿ; ವೈರಾಗ್ಯ ಪಂಚಕ; ಸಾಯಣನ ವೇದಾರ್ಥ ಪ್ರಕಾಶ, ಬೃಹದ್ದೇವತಾ ವ್ಯಾಖ್ಯಾನ; ನೀಲಕಂಠ ದೀಕ್ಷಿತನ  ಶಾಂತಿ ವಿಲಾಸ, ವೈರಾಗ್ಯಶತಕಗಳೂ, ಗುಮಾನಿ ಮತ್ತು ವೆಂಕಟಾಧ್ವರಿಗಳ ಉಪದೇಶ ಶತಕ, ಸುಭಾಷಿತ ಕೌಸ್ತುಭ ಮೊದಲಾದವು ಪ್ರಸಿದ್ಧ ಕೃತಿಗಳಾಗಿವೆ. 

	ಕಾವ್ಯಸಂಕಲನಗಳು ಲಘುಕಾವ್ಯಗಳ ಕಕ್ಷೆಗೇ ಸೇರುತ್ತವೆ. ವಿಷಯ ಕ್ಕನುಗುಣವಾಗಿ ಭಿನ್ನಕೃತಿಗಳಿಂದ ಪದ್ಯಗಳನ್ನು ಸಂಗ್ರಹಿಸಿದ ಕೃತಿಗಳೇ ಇಂಥ ಸಂಕಲನಗಳು. ಈ ಬಗೆಯ ಕೃತಿಗಳು ಸಂಸ್ಕøತ ಸಾಹಿತ್ಯದಲ್ಲಿ ಹೇರಳವಾಗಿವೆ. ಸಂಸ್ಕøತ ಸಂಕಲನ ಸಂಗ್ರಹಗಳಲ್ಲಿ ಪ್ರಾಚೀನವಾದುದು ಕವೀಂದ್ರ ವಚನ ಸಮುಚ್ಚಯ (ಸು. 1000). ಇದರಲ್ಲಿ 525ಶ್ಲೋಕಗಳಿವೆ. ಇದರ ಕರ್ತೃ ತಿಳಿಯದು. ಇಮ್ಮಡಿ ವಿಕ್ರಮಾದಿತ್ಯನ ಮಗನಾದ ಸೋಮೇಶ್ವರನ ಅಭಿಲಷಿತಾರ್ಥ ಚಿಂತಾಮಣಿ, ಗೋವರ್ಧನನ ಆರ್ಯಾಸಪ್ತಶತಿ, ಶ್ರೀಧರದಾಸನ ಸದುಕ್ತಿ ಕರ್ಣಾಮೃತ, ಜಲ್ಹಣನ ಸೂಕ್ತಿ ಮುಕ್ತಾವಳಿ, ಕಲಿಂಗರಾಯ ಸೂರ್ಯನ ಸೂಕ್ತಿರತ್ನಹಾರ, ಸಾಯಣಾಚಾರ್ಯರ ಸುಭಾಷಿತ ಸುಧಾನಿಧಿ; ರೂಪಗೋಸ್ವಾಮಿಯ ಪದ್ಯಾವಳಿ, ಪೆದ್ದಭಟ್ಟನ ಸೂಕ್ತಿವಾರಿಧಿ, ಸಾಂಬನ ಬುಧಭೂಷಣ; ಹರಿಭಾಸ್ಕರನ ಪದ್ಯಾಮೃತ ತರಂಗಿಣಿ, ಶಿವದತ್ತನ ಸುಭಾಷಿತ ರತ್ನ ಭಾಂಡಾಗಾರ, ಮುಕುಂದನ ಪದ್ಯಾವಳಿ, ಗೋವಿಂದಭಟ್ಟನ ಪದ್ಯಮುಕ್ತಾವಳಿ; ಕವಿಭಟ್ಟನ ಪದ್ಯಸಾರ ಸಂಗ್ರಹ, ವೆಂಕಟಾಧ್ವರಿಯ ಸುಭಾಷಿತ ಕೌಸ್ತುಭ, ಶ್ರೀಕೃಷ್ಣನ ಸುಭಾಷಿತ ಪ್ರಂಬಂಧ, ಸುಭಾಷಿತ ರತ್ನಕೋಶ, ಭಟ್ಟ ಗೋವಿಂದನ ಸಾರಸಂಗ್ರಹ ಸುಧಾರ್ಣವ, ಕೆಳದಿ ಬಸವಪ್ಪನಾಯಕನ ಸುಭಾಷಿತ ಸುರದ್ರುಮ, ಸುಂದರ ದೇವನ ಸೂಕ್ತಿ ಸುಂದರ ಮೊದಲಾದ ಸಂಗ್ರಹಕಾವ್ಯಗಳು ಸಂಸ್ಕøತ ಸಾಹಿತ್ಯದ ಬೆಳೆವಣಿಗೆಯಲ್ಲಿ ಮಹತ್ತ್ವದ ಪಾತ್ರ ವಹಿಸಿವೆ.           *	

	ಗದ್ಯ ಸಾಹಿತ್ಯ : ಸಂಸ್ಕøತ ಗದ್ಯಸಾಹಿತ್ಯದ ಉಗಮವನ್ನೂ ವೇದಗಳಲ್ಲಿಯೇ ಗುರುತಿಸಲಾಗಿದೆ. ಕಥೆಗಳು ಮೊದಲು ಬಿಡಿಬಿಡಿಯಾಗಿ ಆರಂಭಗೊಂಡು ಬೆಳೆವಣಿಗೆಯ ಹಂತದಲ್ಲಿ ನೀತಿಬೋಧನೆಯ ಅಂಶವನ್ನು ಒಳಗೊಂಡು ನೀತಿಪ್ರತಿಪಾದನೆಗೆ ಪದ್ಯಗಳನ್ನು ಬಳಸಿಕೊಳ್ಳಲಾಯಿತು. ಕಥೆಗಳಲ್ಲಿ ಬರುವ ಪಾತ್ರಗಳು ನೀತಿಬೋಧನೆಗೆ ಹೊಸ ಕಥೆ ಉಪಕಥೆಗಳನ್ನು ಉಪಯೋಗಿಸಿಕೊಂಡು ಕಥೆಗಳ ಆಕಾರವನ್ನೂ ಬೆಳೆಸಿದವು. ಕಥೆಯ ಬೆಳೆವಣಿಗೆಯಲ್ಲಿ ಇಂತಹ ಅನೇಕ ಹಂತಗಳನ್ನು ಗುರುತಿಸಬಹುದಾಗಿದೆ. 

	ಸಂಸ್ಕøತ ಸಾಹಿತ್ಯದ ಅತ್ಯಂತ ಪ್ರಾಚೀನ ಕಥೆಗಳೆಂದರೆ ಜನಪದ ಕಥೆಗಳೇ ಆಗಿವೆ. ದೈವಾಂಶ ಸಂಭೂತರಾದ ಯಕ್ಷ, ಗಂಧರ್ವ ವಿದ್ಯಾಧರರ ಅದ್ಭುತವೂ ರೊಮಾಂಚಕಾರಿಯೂ ಆದ ಕೃತ್ಯಗಳೇ ಇವುಗಳ ವಸ್ತು. ಕಥೆಗಾರನ ಕಲ್ಪನೆ ಊಹೆಗಳು ಹೆಚ್ಚಿದ್ದಷ್ಟೂ ಕಥೆಗಳ ಸ್ವಾರಸ್ಯವೂ ಅಧಿಕ. ಇಂತಹ ಜನಪ್ರಿಯ ಕಥೆಗಳ ಮೇಲೆ ಪ್ರಭಾವ ಬೀರುವಲ್ಲಿ ಆಯಾ ಕಾಲದ ಮತಧರ್ಮಗಳ ಪಾತ್ರವೂ ಹೆಚ್ಚಿನದಾಗಿದೆ. ಅದರಲ್ಲೂ ಬೌದ್ಧ, ಜೈನಧರ್ಮಗಳು ಧರ್ಮಪ್ರಚಾರದಲ್ಲಿ ಇಂತಹ ಕಥೆಗಳನ್ನು ಅತ್ಯಧಿಕವಾಗಿ ಬಳಸಿಕೊಂಡಿರುವುದನ್ನು ಗಮನಿಸಬಹುದು. ಇಂಥ ಕಥೆಗಳಲ್ಲಿ ಮುಖ್ಯವಾದವುಗಳೆಂದರೆ ಗುಣಾಢ್ಯನ ಬೃಹತ್ಕಥೆಯ ಸಂಗ್ರಹಗಳು. ಬೃಹತ್ಕಥೆ ಮೂಲತಃ ಪ್ರಾಕೃತದಲ್ಲಿದ್ದರೂ ಮುಂದಿನ ಸಂಸ್ಕøತ ಕವಿಗಳಿಗೆ ಪ್ರಮುಖ ಆಕರ ಗ್ರಂಥವಾಗಿದೆ. ಇದು ರಾಮಾಯಣ, ಮಹಾಭಾರತಗಳಷ್ಟೇ ಪ್ರಾಧಾನ್ಯತೆ ಪಡೆದಿದೆ. ಸಂಸ್ಕøತದಲ್ಲಿ ಉದಯನನಿಗೆ ಸಂಬಂಧಿಸಿದ ಕಾವ್ಯನಾಟಕಗಳು, ಬಾಣನ ಕಾದಂಬರಿ, ಭವಭೂತಿಯ ಮಾಲತಿ ಮಾಧವ, ಹರ್ಷನ ನಾಗಾನಂದ ಮೊದಲಾದ ಅನೇಕ ಪ್ರಮುಖ ಕೃತಿಗಳಿಗೆ ಮೂಲ ಆಕರ ಬೃಹತ್ಕಥೆಯೇ ಆಗಿದೆ. 

	ಗುಣಾಢ್ಯನ ಬೃಹತ್ಕಥೆ ಉಪಲಬ್ಧವಿಲ್ಲದಿದ್ದರೂ ಅದರ ಸಂಗ್ರಹಗಳು ಉಪಲಬ್ಧವಾಗಿವೆ. 9ನೆಯ ಶತಮಾನದ ಬುಧಸ್ವಾಮಿಯೂ 11ನೆಯ ಶತಮಾನದವರಾದ ಕ್ಷೇಮೇಂದ್ರ, ಸೋಮದೇವ  ಅದರ ಸಂಗ್ರಹಕಾರರು. ಬುಧಸ್ವಾಮಿಯ ಶ್ಲೋಕಸಂಗ್ರಹ ಅಥವಾ ಬೃಹತ್ಕಥಾ ಶ್ಲೋಕಸಂಗ್ರಹ ವೇ ಅತ್ಯಂತ ಪ್ರಾಚೀನವಾದದ್ದಾಗಿದೆ. ಇದರಲ್ಲಿ 28 ಸರ್ಗಗಳೂ 4539 ಶ್ಲೋಕಗಳೂ ಇವೆ. ವಾಸ್ತವವಾಗಿ 25,000 ಶ್ಲೋಕಗಳಿಂದ ಕೂಡಿರಬೇಕಾದ ಇವನ ಕೃತಿ ಅಪೂರ್ಣವಾಗಿ ದೊರೆತಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಕ್ಷೇಮೇಂದ್ರನ ಬೃಹತ್ಕಥಾ ಮಂಜರಿ (ಸು.1037), ಸೋಮದೇವನ ಕಥಾಸರಿತ್ಸಾಗರ (ಸು. 1063) ಈ ಸಂಗ್ರಹಗಳು ಬುಧಸ್ವಾಮಿಯ ಕೃತಿಯ ಅನಂತರ ಲಭ್ಯವಾಗಿರುವ ಕೃತಿಗಳಾಗಿವೆ. 

	ಜನಪ್ರಿಯ ಕಥೆಗಳಲ್ಲಿ ಬೌದ್ಧರ ಅವಧಾನ ಕಥೆಗಳು ಪ್ರಧಾನವಾಗಿವೆ. ಇಂತಹ ಕಥೆಗಳು ಕ್ರಿ.ಶ.ಒಂದನೆಯ ಶತಮಾನದಲ್ಲಿಯೇ ರಚನೆಗೊಂಡಿರ ಬೇಕೆಂಬ ಅಭಿಪ್ರಾಯವಿದೆ. ಜನ್ಮಾಂತರದ ಕರ್ಮಗಳಿಂದ ಪ್ರಸಕ್ತ ಜನ್ಮ ರೂಪಿತವಾಗುತ್ತದೆಂಬ ತತ್ತ್ವಗಳನ್ನು ಈ ಕಥೆಗಳು ಜನಪ್ರಿಯವಾಗಿ ನಿರೂಪಿಸುತ್ತವೆ. ಕ್ಷೇಮೇಂದ್ರನ ಅವಧಾನ ಕಲ್ಪಲತಾ (ಸು. 1050) ಈ ರೀತಿಯ ಗ್ರಂಥಗಳಲ್ಲಿ ಪ್ರಮುಖವಾಗಿದೆ. 

	ಆರ್ಯಶೂರನ ಜಾತಕಮಾಲೆ ಸು. 500 ಕಥೆಗಳ ಸಂಗ್ರಹವಾಗಿದೆ. ಇವು ಬೋಧಿಸತ್ವನ ಪೂರ್ವ ಜನ್ಮವೃತ್ತಾಂತಗಳಿಗೆ ಸಂಬಂಧಪಟ್ಟಂತಹ ಕಥೆಗಳಾಗಿವೆ. ಅಶ್ವಘೋಷನಿಂದ ರಚನೆಗೊಂಡಿರಬಹುದೆಂದು ಅಭಿಪ್ರಾಯಿಸಲಾದ ಸೂತ್ರಾಲಂಕಾರ, ಕಲ್ಪನಾ ಮಂಡಿತಕಾ ಎಂಬುವು ಗದ್ಯಪದ್ಯಗಳ ಮಿಶ್ರಣ ಕೃತಿಗಳಾಗಿದ್ದು ಜಾತಕ ಮತ್ತು ಅವಧಾನ ಕಥೆಗಳ ಸಂಗ್ರಹಗಳಾಗಿವೆ. 

	ಬೃಹತ್ಕಥಾ ಮಂಜರಿ ಮತ್ತು ಕಥಾ ಸರಿತ್ಸಾಗರಗಳಲ್ಲಿ ಸೇರಿಕೊಂಡಿ ರುವ ಬೇತಾಳ ಪಂಚವಿಂಶತಿಯೂ ಬಹು ಜನಪ್ರಿಯವಾದ ಕಥಾಸಂಗ್ರಹ ವಾಗಿದೆ. ವಿಕ್ರಮರಾಜ ಬೇತಾಳವೊಂದನ್ನು ವಶಪಡಿಸಿಕೊಳ್ಳಲು ಪ್ರಯತ್ನಪಟ್ಟಾಗ ಬೇತಾಳ ಅವನಿಗೆ ಹೇಳುವ ಇಪ್ಪತ್ತೈದು ಕಥೆಗಳನ್ನು ಇದು ಒಳಗೊಂಡಿದೆ. ಭಾರತದ ಹಲವಾರು ಭಾಷೆಗಳಿಗೆ ಈ ಕಥೆಗಳು ಪರಿವರ್ತಿತವಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ದ್ವಾತ್ರಿಂಶತ್ಪು ತ್ಥಳಿಕಾ ಅಂದರೆ 32 ಬೊಂಬೆಗಳು ವಿಕ್ರಮಾದಿತ್ಯನ ಸಿಂಹಾಸನದ ಇಕ್ಕೆಲಗಳಲ್ಲಿ ಇದ್ದಂತಹವು. ವಿಕ್ರಮಾದಿತ್ಯನ ಸಿಂಹಾಸನವನ್ನು ಆರೋಹಿಸಲು ಮುಂದಾದ ಭೋಜರಾಜನಿಗೆ ದಿನಕ್ಕೊಂದು ಕಥೆಯಂತೆ 32 ದಿನಗಳು 32 ಕಥೆಗಳನ್ನು ಹೇಳಿದವು ಎಂದು ಪ್ರತೀತಿ. ಇದರ ಒಂದು ಪಾಠ 14ನೆಯ ಶತಮಾನದ ಕ್ಷೇಮಂಕರನಿಂದ ರಚಿತವಾಗಿದೆ. ಈ ದಿಶೆಯಲ್ಲಿ ರಚನೆಗೊಂಡಿರುವ ಇತರ ಕೃತಿಗಳಿವು : ಅನಂತನ ವೀರಚರಿತ; ಕರ್ತೃ ಯಾರೆಂದು ತಿಳಿಯದ ವಿಕ್ರಮೋದಯ; ಜೈನ ಮೂಲದ ಪಂಚದಂಡಚ್ಛತ್ರ ಪ್ರಬಂಧ; ಶಿವದಾಸನ ಶಾಲಿವಾಹನ ಕಥಾ ಕಾಲ, ಕರ್ತೃ ಯಾವುದೇ ಮಾಹಿತಿಗಳಿಲ್ಲದೆ ಉಪಲಬ್ಧವಾಗಿರುವ ಶುಕಸಪ್ತತಿ; (14ನೆಯ ಶತಮಾನ) ಗಂಡನನ್ನು ವಂಚಿಸ ಹೊರಟ ಒಡತಿಯ ದುರ್ಮಾರ್ಗವನ್ನು ತಪ್ಪಿಸಲು ಗಿಳಿಯೊಂದು ಅವಳಿಗೆ ಹೇಳುವ 70 ಕಥೆಗಳ ಸಂಗ್ರಹವಾಗಿದೆ. ಇದು ಪಾರ್ಸಿಭಾಷೆಗೆ ಪರಿವರ್ತಿತವಾಗಿದೆ. 

	16ನೆಯ ಶತಮಾನದಲ್ಲಿ ಬಲ್ಲಾಳಸೇನನಿಂದ ರಚಿತವಾದ ಭೋಜಪ್ರಬಂಧ ಹಾಸ್ಯಪ್ರಧಾನ ಕಥೆಗಳ ಸಂಗ್ರಹವಾಗಿದೆ. ಈ ಪರಂಪರೆಗೆ ಸೇರುವ ಇತರ ಗದ್ಯಕೃತಿಗಳೆಂದರೆ ಶಿವದಾಸನ ಕಥಾರ್ಣವ; ವೀರ ಕವಿಯ ಕಥಾಕೌತುಕ; ಆನಂದನ ಮಾಧವಾನಲಕಥಾ; ವಿದ್ಯಾಪತಿಯ ಪುರುಷ ಪರೀಕ್ಷಾ ಮೊದಲಾದವು. 

	ಭಾರತೀಯ ಕಥಾ ಸಾಹಿತ್ಯದಲ್ಲಿ ನೀತಿಗೆ ಅತ್ಯುನ್ನತ ಸ್ಥಾನವಿದೆ. ಮೃಗಪಕ್ಷಿಗಳಿಗೆ ಮಾನವನ ಗುಣಗಳನ್ನು ಆರೋಪಿಸಿ ಆ ಮೂಲಕ ಕಥೆಯನ್ನು ಬಿತ್ತರಿಸುವ ತಂತ್ರ ಇವುಗಳದ್ದಾಗಿದೆ. ಆದ್ದರಿಂದಲೇ ಇಂತಹ ಕಥೆಗಳಿಗೆ ಶ್ವಾಪದಾಖ್ಯಾನ ಎಂಬ ಹೆಸರನ್ನೂ ನೀಡಲಾಗಿದೆ. 

	ಜೀವಿಯ ಸದ್ಗುಣ, ದುರ್ಗುಣಗಳು ಅದರ ಕೃತ್ಯಗಳನ್ನವಲಂಭಿಸಿವೆ. ಜನ್ಮಾಂತರ ವಾದವೇ ಇದರ ಅಡಿಗಲ್ಲು. ಇವೂ ಒಂದು ಬಗೆಯ ಕಲ್ಪಿತ ಕಥೆಗಳೇ. “ಈ ಕಲ್ಪಿತ ಕಥೆಗಳೆಲ್ಲ ಮಾನವನ ರಾಜಕೀಯ ಮತ್ತು ದೈನಂದಿನ ನಿತ್ಯ ಜೀವನ ಕ್ಷೇತ್ರಕ್ಕೆ ಸಂಬಂಧಪಟ್ಟಂತಹವು. ಇವುಗಳು ಸಾಮಾನ್ಯವಾಗಿ ರಾಜಕುಮಾರರಿಗಾಗಿಯೇ ರಚಿತವಾದಂತಿವೆ. ಜೀವನದ ಅವಗುಣಗಳಾದ ದುರಾಶೆ, ಡಂಭಗಾರಿಕೆ, ವಂಚನೆ, ಮೋಸಕೃತ್ಯ, ಕೃತಘ್ನತೆ ಮೊದಲಾದವು ಇವುಗಳಲ್ಲಿ ಬಹಳ ತೀಕ್ಷ್ಣವಾಗಿ ಖಂಡಿಸಲ್ಪಟ್ಟು ದಯಾಪರತೆ, ಪೂಜ್ಯತೆ, ಕರ್ತವ್ಯನಿಷ್ಠೆ, ರಾಜನಿಷ್ಠೆ, ಪತಿಪತ್ನಿಯರ ಪ್ರೇಮ, ಆಸಕ್ತಿ ಅನುರಾಗಗಳು ಶ್ಲಾಘಿತವಾಗಿವೆ. ಈ ಕಥೆಗಳಲ್ಲೆಲ್ಲ ಸರಳ ಹಾಸ್ಯವೂ ಕಟು ವ್ಯಂಗ್ಯವೂ ಸ್ಫುಟವಾಗಿ ಪ್ರದರ್ಶಿತವಾ ಗಿವೆ”. ಈ ರೀತಿಯ ಕಥೆಗಳಿಗೆ ಅತ್ಯುತ್ತಮ ನಿದರ್ಶನಗಳೆಂದರೆ ಪಂಚತಂತ್ರ ಮತ್ತು ಹಿತೋಪದೇಶಗಳು. 

	ವಿಷ್ಣುಶರ್ಮನ ಪಂಚತಂತ್ರದ ಕಾಲ ಸು. 3ನೆಯ ಶತಮಾನವಿರ ಬಹುದೆಂದು ದೊರೆತಿರುವ ಆಧಾರಗಳಿಂದ ಊಹಿಸಲಾಗಿದೆ. ಇದು ಪ್ರಪಂಚದಾದ್ಯಂತ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿದೆ. ಮಿತ್ರಭೇದ, ಮಿತ್ರಲಾಭ, ವಿಗ್ರಹ, ಲಬ್ಧಪ್ರಕಾಶ, ಅಪರೀಕ್ಷಿತಕಾರಕ ಎಂಬ ಐದು ತಂತ್ರಗಳೇ ಪಂಚತಂತ್ರ. ಪಂಚತಂತ್ರವು ತಂತ್ರಾಖ್ಯಾಯಿಕಾ ಮತ್ತು ಪಂಚತಂತ್ರ ಎಂಬ ಎರಡು ರೂಪಗಳಲ್ಲಿ ಉಪಲಬ್ಧವಾಗಿದೆ. ಇದೇ ಪರಂಪರೆಯಲ್ಲಿ ಬಂದ ಇನ್ನಿತರ ಕೃತಿಗಳೆಂದರೆ, 1199ರಲ್ಲಿ ಪೂರ್ಣಭದ್ರ (ಜೈನ) ರಚಿಸಿರುವ ಪಂಚಾಖ್ಯಾನಕ ಮತ್ತು ಹೆರ್ಟಲ್ ಎಂಬ ಪಾಶ್ಚಾತ್ಯ ಪಂಡಿತ ಬೇರೆ ಬೇರೆ 50 ಭಾಷೆಗಳಲ್ಲಿ ಪ್ರಚಾರದಲ್ಲಿರುವ 200ಕ್ಕಿಂತ ಹೆಚ್ಚಿನ ಪಂಚತಂತ್ರದ ಪ್ರಭೇದಗಳನ್ನು ಕಂಡುಹಿಡಿದು ಪಟ್ಟಿ ಮಾಡಿದ್ದಾನೆ. 

	ಧವಳಚಂದ್ರನ ಆಶ್ರಯದಲ್ಲಿದ್ದ ನಾರಾಯಣನೆಂಬುವನು ರಚಿಸಿರುವ ಹಿತೋಪದೇಶ ದಲ್ಲಿ ಹಲವು ಕಥೆಗಳನ್ನು ಪಂಚತಂತ್ರದಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಮಿತ್ರಲಾಭಸುಹೃದ್ಭೇದ, ವಿಗ್ರಹ, ಸಂಧಿ ಎಂಬ ನಾಲ್ಕು ಪ್ರಕರಣಗಳಿವೆ. ಈ ಗುಂಪಿಗೆ ಸೇರುವ ಇತರ ಕೆಲವು ಕೃತಿಗಳೆಂದರೆ ಸಿದ್ಧಶ್ರೀ (ಸು. 906) ರಚಿಸಿರುವ ಉಪಮಿತಿಭಾವ ಪ್ರಪಂಚಕಥಾ ಮತ್ತು ಹೇಮಚಂದ್ರನ ತ್ರಿಷಷ್ಠೀಶಲಾಕಾಪುರುಷ ಚರಿತ ದಲ್ಲಿ ಕಂಡುಬರುವ ಜೈನಗುರುಗಳ ಜೀವನ ಚರಿತ್ರೆಗೆ ಸಂಬಂಧಿಸಿದ ಕೆಲವು ನೀತಿಕಥೆಗಳು. 

	ಗದ್ಯ ಸಾಹಿತ್ಯದಲ್ಲಿ ಬಾಣನನ್ನು ಮೊದಲ ಗದ್ಯಕವಿ ಎಂದು ಗುರುತಿಸಲಾಗಿದೆ. ಹರ್ಷಚರಿತ ಮತ್ತು ಕಾದಂಬರಿ ಈತನ ಕೃತಿಗಳು. ಹರ್ಷಚರಿತೆ 8 ಉಚ್ಛ್ವಾಸಗಳಿಂದ ಕೂಡಿದೆ. ಇದು ದೊರೆ ಹರ್ಷನ ಚರಿತ್ರೆಯನ್ನು ಚಿತ್ರಿಸುತ್ತದೆ. ಕಾದಂಬರಿ ಮತ್ತು ಚಂದ್ರಾಪೀಡ, ಮಹಾಶ್ವೇತೆ ಮತ್ತು ಪುಂಡರೀಕ ಇವರುಗಳ ಪ್ರೇಮ ಕಥೆಯೇ ಇವನ ಕಾದಂಬರಿ ಕೃತಿಯ ವಸ್ತು. 

	ಬಾಣನ ಅನಂತರ ಬಂದ ದಂಡಿಯ (ಸು. 650) ದಶಕುಮಾರ ಚರಿತೆ ಮತ್ತು ಅವಂತೀ ಸುಂದರಿ ಕಥಾ ಗದ್ಯ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳೆನಿಸಿವೆ. ರಾಜವಾಹನ ಮತ್ತು ಅವನ ಗೆಳೆಯರಾದ ಒಂಬತ್ತು ರಾಜಕುಮಾರರ ಕಥೆ ದಶಕುಮಾರ ಚರಿತೆಯಲ್ಲಿದೆ. ಅವಂತೀ ಸುಂದರಿಕಥೆಯು ದಶಕುಮಾರಚರಿತೆಯ ಪೂರ್ವಭಾಗವಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಶೂದ್ರಕ, ವರರುಚಿ, ವ್ಯಾದಿ, ಉಪವರ್ಷ ಮೊದಲಾದವರ ಜೀವನ ವಿಚಾರಗಳು, ರಾಜವಂಶದ ವಿವರಗಳು ಈ ಕಥೆಯಲ್ಲಿ ಮುಖ್ಯವಾಗಿವೆ. 

	ಸುಬಂಧುವಿನ (ಸು. 8ನೆಯ ಶತಮಾನ) ವಾಸವದತ್ತ ಬಹುಮುಖ್ಯ ಗದ್ಯಕೃತಿಯಾಗಿದೆ. ಇದರ ಮೂಲವನ್ನು ಕೆಲವರು ಬಾಣನಲ್ಲಿಯೂ ಮತ್ತೆ ಕೆಲವರು ಪತಂಜಲಿಯಲ್ಲಿಯೂ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ವಾಸವದತ್ತ ಮತ್ತು ಕಂದರ್ಪಕೇತು ಇವರ ಪ್ರಣಯದ ಕಥೆಯೇ ಈ ಕೃತಿಯ ವಸ್ತು. ಸುಬಂಧುವಿನ ಅನಂತರ ಸಂಸ್ಕøತ ಗದ್ಯಸಾಹಿತ್ಯ ಇಳಿಮುಖವಾಗತೊಡಗಿತು. 

	ಧನಪಾಲನ ತಿಲಕಮಂಜರಿ (ಸು. 973) ಬಾಣನ ಕಾದಂಬರಿಯ ಅನುಕರಣವೆಂಬುದು ವಿದ್ವಾಂಸರ ಅಭಿಪ್ರಾಯ. ಗದ್ಯಚಿಂತಾಮಣಿ (ಸು. 1200) ಸಂನ್ಯಾಸಿ ಜೀವಂಧರನ ಕಥೆಯನ್ನೊಳಗೊಂಡಿದೆ. ಇದಲ್ಲದೆ ತಮಿಳಿನ ಜೀವಕ ಚಿಂತಾಮಣಿ ಎಂಬ ಕೃತಿಯನ್ನು ಕ್ಷತ್ರ ಚೂಡಾಮಣಿ ಎಂಬ ಶೀರ್ಷಿಕೆಯಲ್ಲಿ ಸಂಸ್ಕøತಕ್ಕೆ ಭಾಷಾಂತರಿಸಿದ್ದಾನೆ. ವಾಮನಭಟ್ಟ ಬಾಣನ ವೇಮಭೂಪಾಲ ಚರಿತೆ ಕಾಳಿದಾಸನ ರಘುವಂಶದ ಮಾದರಿಯಲ್ಲಿ ರಚನೆಗೊಂಡಿದೆ. ವಿಶಾಖದತ್ತನ ಮುದ್ರಾರಾಕ್ಷಸ ಪೂರ್ವ ಸಂಕಥಾನಕ - ಇದು ಇವನ ನಾಟಕ ಕೃತಿಯ ಗದ್ಯಾನುವಾದವಾಗಿದೆ. 	ಅನಂತರದ ದಿನಗಳಲ್ಲಿ ರಾಜಾಶ್ರಯ ದೊರೆತಾಗ ಗದ್ಯ ಸಾಹಿತ್ಯ ಹುಲುಸಾಗಿ ಬೆಳೆಯಿತು. ಈ ಗದ್ಯ ಕೃತಿಗಳು ಮುಖ್ಯವಾಗಿ ಆಶ್ರಯ ರಾಜರ ಸ್ತುತಿ ಮಾದರಿಯವು; ಪ್ರಾಚೀನ ಕಥೆಗಳ ರೂಪಾಂತರಗಳು ಅಥವಾ ಸಂಗ್ರಹಗಳಾಗಿವೆ. ಇತ್ತೀಚಿನ ಶತಮಾನಗಳಲ್ಲಿ ಪಾಶ್ಚಾತ್ಯ ಪ್ರಭಾವಗಳಿಂದ ಸಂಸ್ಕøತದಲ್ಲಿಯೂ ಇಂಗ್ಲಿಷ್‍ನ ನಾವೆಲ್ ಸ್ವರೂಪದ ಕೆಲವು ಕಾದಂಬರಿಗಳ ರಚನೆಗಳು ಕಂಡುಬಂದಿವೆ. ಆರ್.ಕೃಷ್ಣಮಾಚಾರ್ಯರ ಸುಶೀಲ, ರಾಜಗೋಪಾಲಚಕ್ರವರ್ತಿಗಳ ಶೈವಲಿನಿ ಮತ್ತು ಕುಮುದಿನಿ ಮೊದಲಾದವುಗಳನ್ನು ಹೆಸರಿಸಬಹುದು. ಸ್ವತಂತ್ರ ಗ್ರಂಥಗಳೊಂದಿಗೆ ದೇಶಭಾಷೆಗಳ ಕಾದಂಬರಿಗಳೂ ಸಂಸ್ಕøತಕ್ಕೆ ಪರಿವರ್ತನೆಗೊಂಡಿವೆ. ಮುಡಂಬೆ ಅನಂತಾಚಾರ್ಯರ ಸಂಸಾರ ಚಕ್ರ ಹಿಂದಿ ಕಾದಂಬರಿಯ ಅನುವಾದ. ಕಂಚಿಯ ತಿರುಮಲೈ ಶ್ರೀಶೈಲ ತಾತಾಚಾರ್ಯರು ಕ್ಷತ್ರಿಯರಮಣಿ, ದುರ್ಗೇಶ ನಂದಿನಿ ಈ ಬಂಗಾಲಿ ಕಾದಂಬರಿಗಳನ್ನು  ಸಂಸ್ಕøತಕ್ಕೆ ಭಾಷಾಂತರಿಸಿದ್ದಾರೆ. ಸಹೃದಯ, ಉದ್ಯಾನ ಮೊದಲಾದ ಸಾಹಿತ್ಯಕ ಪತ್ರಿಕೆಗಳಲ್ಲಿ ಇತರ ಭಾಷೆಯ ಕೃತಿಗಳ ಸಂಸ್ಕøತ ಭಾಷಾಂತರಗಳು ಪ್ರಕಟಗೊಂಡಿವೆ. ಭಾಸ ಮತ್ತು ಷೇಕ್ಸ್‍ಪಿಯರ್ ನಾಟಕಗಳ ಕಥಾಸಂಗ್ರಹಗಳೂ ಸಂಸ್ಕøತದಲ್ಲಿ ರಚನೆಗೊಂಡಿವೆ.	*

	ಛಂದಸ್ಸು : ವೇದಗಳು ಸಂಸ್ಕøತ ಕಾವ್ಯಗಳಿಗಿಂತಲೂ ಪ್ರಾಚೀನ. ಋಗ್ವೇದದ ಋಕ್ಕುಗಳೇ ಛಂದೋಮಯವಾಗಿರುವುದರಿಂದ ಛಂದಸ್ಸಿಗೆ ವೇದಾಂಗವೆಂಬ ಪ್ರಶಸ್ತಿ ಬಂದುದು ಸಹಜವೇ ಆಗಿದೆ. ಸಂಸ್ಕøತದ ಎಲ್ಲ ಶಾಸ್ತ್ರಗಳಿಗೂ ವೇದವೇದಾಂಗಗಳೇ ಮೂಲ. ಕೇವಲ ವೈದಿಕ ಛಂದಸ್ಸುಗಳ ವಿವರಣೆಗೆ ಹೊರಟ ಉಪಲಬ್ಧ ಪ್ರಾಚೀನತಮ ಕೃತಿಯೆಂದರೆ ಪಿಂಗಲನ (ನಾಗ) ಛಂದಸ್ಸೂತ್ರ. ಮೊದಲನೆಯ ಐದು ಅಧ್ಯಾಯಗಳಲ್ಲಿ ಲೌಕಿಕ ವೃತ್ತಜಾತಿಗಳ ವಿವರಣೆಯಿದ್ದರೆ, ಕಡೆಯ ಮೂರು ಅಧ್ಯಾಯಗಳಲ್ಲಿ ವೈದಿಕ ಛಂದಸ್ಸುಗಳ ಪ್ರತಿಪಾದನೆ ಬರುತ್ತದೆ. ಪಿಂಗಲನು ಕ್ರಾಷ್ಟುಕಿ, ಯಾಸ್ಕ, ಮೊದಲಾದ ಪೂರ್ವಾಚಾರ್ಯರನ್ನು ಸ್ಮರಿಸಿದ್ದಾನೆ. ಭರತನ ನಾಟ್ಯಶಾಸ್ತ್ರದಲ್ಲಿಯೂ (ಸು. 1ನೆಯ ಶತಮಾನ) ವರಾಹಮಿಹಿರನ (sಸು.587) ಬೃಹತ್ಸಂಹಿತೆಯಲ್ಲಿಯೂ ಛಂದಸ್ಸನ್ನು ಕುರಿತ ಅಧ್ಯಾಯಗಳಿವೆ. ಜನಾಶ್ರಯ (ಸು.600), ಜಯದೇವ (ಸು.900), ಜಯಕೀರ್ತಿ(ಸು.1000), ಕ್ಷೇಮೇಂದ್ರ (ಸು.1050), ಹೇಮಚಂದ್ರ (ಸು.1100) ಇವರ ಛಂದೋಗ್ರಂಥಗಳು ದೊರೆಯುತ್ತವೆ. ಆದರೆ ಕೇದಾರಭಟ್ಟನ (ಸು.1100) ವೃತ್ತರತ್ನಾಕರ, ಗಂಗಾದಾಸನ (ಸ.1450) ಛಂದೋಮಂಜರಿ, ಕಾಳಿದಾಸನದೆನ್ನುವ ಶ್ರುತಬೋಧ - ಈ ಗ್ರಂಥಗಳು ಲೌಕಿಕ ವೃತ್ತ ಜಾತಿಗಳನ್ನು ಮಾತ್ರ ವಿವರಿಸುತ್ತವೆ. 

	ಪಿಂಗಲ ಪೂರ್ವದ ಛಂದೋವಿವೇಚನೆ ತಿಳಿಯಬೇಕಾದರೆ ಶಿಕ್ಷಾ, ಪ್ರಾತಿಶಾಖ್ಯ,  ಬ್ರಾಹ್ಮಣ, ಶ್ರೌತಸೂತ್ರ, ಅನುಕ್ರಮಣಿ, ಮುಂತಾದೆಡೆಗಳಲ್ಲಿ ಬರುವ ಪ್ರಾಸಂಗಿಕ ವಿಚಾರಗಳನ್ನು ಅಭ್ಯಾಸ ಮಾಡಬೇಕು. ಆಗ “ಛಂದಃಪಾದೌತು ವೇದಸ್ಯ” (ಪಾಣಿನೀಯ ಶಿಕ್ಷಾ-41) ಎಂದು ವೇದಾಂಗಕಾರರೆಲ್ಲರೂ ಒಪ್ಪಿದುದು ವೇದ್ಯವಾಗುತ್ತದೆ. ಅಷ್ಟೇ ಅಲ್ಲ ಋಗ್ವೇದಸಂಹಿತೆಯಲ್ಲಿಯೇ ಗಾಯತ್ರೀ, ಉಷ್ಣಿಕ್, ಅನುಷ್ಟುಭ್, ಬೃಹತೀ, ತ್ರಿಷ್ಟುಭ್, ಜಗತೀ ಮುಂತಾದ ಛಂದಸ್ಸುಗಳು ನಿರ್ದಿಷ್ಟವಾಗಿವೆ. ಸಪ್ತ ಛಂದಾಂಸಿ ಚತುರುತ್ತರಾಣಿ ವಿರಡಷ್ಟಮಾನಿ ಎಂಬುದು ಸಾಮಾನ್ಯ ಸೂತ್ರ. 24 ಅಕ್ಷರಗಳ ಛಂದಸ್ಸು ಗಾಯತ್ರೀ. ಉಷ್ಣಿಕ್, 32 ಅಕ್ಷರಗಳ ಅನುಷ್ಟುಭ್, 36 ಅಕ್ಷರಳ ಬೃಹತಿ, 40 ಅಕ್ಷರಗಳ ಪಂಕ್ತಿ, 44 ಅಕ್ಷರಗಳ ತ್ರಿಷ್ಟುಭ್, 48 ಅಕ್ಷರಗಳ ಜಗತೀ ಹೀಗೆ ಒಟ್ಟು ಏಳು ಮುಖ್ಯ ವೈದಿಕ ಛಂದಸ್ಸುಗಳು. ಈ ಅಕ್ಷರಬದ್ಧ ಛಂದಸ್ಸುಗಳಲ್ಲಿ ಮೂರು ಅಥವಾ ನಾಲ್ಕು ಸಾಲುಗಳಿರುತ್ತವೆ. ಗಾಯತ್ರಿಗೆ ಮೂರು ಪಾದ, ತ್ರಿಷ್ಟುಭ್ ಮತ್ತು ಜಗತೀಛಂದಸ್ಸುಗಳಿಗೆ ನಾಲ್ಕು ಪಾದಗಳು. ಕ್ರಮವಾಗಿ ಗಾಯತ್ರಿಯ ಒಂದು ಪಾದದಲ್ಲಿ ಅಕ್ಷರಗಳು 8, ತ್ರಿಷ್ಟುಭಿನಲ್ಲಿ 11, ಜಗತಿಯಲ್ಲಿ 12, ಇವಕ್ಕೆ ಅಕ್ಷರಸಂಖ್ಯಾನಿಯಮ ವೊಂದನ್ನು ಬಿಟ್ಟರೆ ಪ್ರಾಚೀನ ಗ್ರಂಥಗಳಲ್ಲಿ ಬೇರಾವ ನಿಯಮವನ್ನೂ ಹೇಳಿಲ್ಲ. ವೇದಮಂತ್ರಗಳ ಶ್ರವಣಮಾಧುರ್ಯಕ್ಕೆ ಉದಾತ್ತಾದಿ ಸ್ವರಯೋಜನೆಯೇ ಮುಖ್ಯ ಕಾರಣವಿರಬಹುದೆನಿಸುತ್ತದೆ.

	ಆದರೆ ಆಧುನಿಕ ಸಂಶೋಧಕರು ಇವುಗಳಲ್ಲಿ ಸೂಕ್ಷ್ಮವಾದರೂ ಪ್ರಾಯಿಕವಾಗಿ ತೋರಿಬರುವ ಕೆಲವೊಂದು ನಿಯಮಗಳನ್ನು ಕಂಡುಹಿಡಿಯಲು ಯತ್ನಿಸಿದ್ದಾರೆ. ಗಾಯತ್ರಿ ಪಾದದಲ್ಲಿ ಮುಖ ಅಂತ್ಯ ಎಂಬ ನಾಲ್ಕು ಅಕ್ಷರಗಳ ಎರಡು ಭಾಗಗಳನ್ನೂ ತ್ರಿಷ್ಟುಭ್, ಜಗತೀಪಾದದಲ್ಲಿ ಮುಖ, ಮಧ್ಯ `ಅಂತ್ಯ ಎಂಬ ಮೂರು ಭಾಗಗಳನ್ನೂ ಕಲ್ಪಿಸಿ, ಇವುಗಳ ಲಕ್ಷಣವನ್ನು ಆರ್ನಾಲ್ಡ್ ಹೇಳಿದ್ದಾನೆ. ಗಾಯತ್ರಿಯಲ್ಲಿ ಮಧ್ಯ ವಿಲ್ಲದ ಕಾರಣ ಯತಿ ಯಿಲ್ಲ. ಮಿಕ್ಕವುಗಳಲ್ಲಿ ಮಧ್ಯದಲ್ಲಿ ನಾಲ್ಕನೆಯ ಇಲ್ಲವೆ ಐದನೆಯ ಅಕ್ಷರದ ಅನಂತರ ಯತಿಯಿರುತ್ತದೆ. ಅಂತ್ಯ ದಲ್ಲಿ ತ್ರಿಷ್ಟುಭ್ ಆದರೆ 9ನೆಯ ಅಕ್ಷರವೂ ಜಗತಿ ಯಾದರೆ 11ನೆಯ ಅಕ್ಷರವೂ ಲಘುವೇ ಆಗಿರುವುದು. ಹಾಗೆಯೇ 8ನೆಯ ಮತ್ತು 10ನೆಯ ಅಕ್ಷರಗಳು ಗುರು ವೇ ಆಗಿರುವುದು ಹೆಚ್ಚು. ಉದಾಹರಣೆಗೆ 

-        UU -       - U   -

ಆ ಕೃಷ್ಣೇನ ರಜಸಾ  ವರ್ತಮಾನೋ (ತ್ರಿಷ್ಟುಭ್)  

   (ಆದಿ) (ಮಧ್ಯ)    (ಅಂತ್ಯ)

ಆದಿಯ ಅಕ್ಷರಗಳಿಗೆ ನಿಯಮವಿಲ್ಲ, ಕಡೆಯ ಅಕ್ಷರಕ್ಕೂ ನಿಯಮವಿಲ್ಲ, ಹಾಗೆಯೇ ಇದೇ ತ್ರಿಷ್ಟುಭ್ ಇನ್ನೊಂದಕ್ಷರ ಕೂಡಿ ಜಗತೀ ಯಾದಾಗ — 

	UU-	U- U- 

ಹ್ವಯಾಮಿ  ರಾತ್ರೀಂ ಜಗತೋ    ನಿವೇಶನೀಂ (ಜಗತೀ)  

(ಆದಿ)      (ಮಧ್ಯ)        (ಅಂತ್ಯ)

	ಹೀಗೆ ಮಧ್ಯದಲ್ಲಿ ಯತಿ, ಅನಂತರ ಎರಡು ಲಘುಗಳು, ಕಡೆಯಲ್ಲಿ ತ್ರಿಷ್ಟುಭಾದರೆ -U-U, ಜಗತಿಯಾದರೆ U-U- ಶ್ರುತಿಗಳು ಸೇರಿಕೊಳ್ಳುತ್ತವೆ. ಗಾಯತ್ರಿಯಲ್ಲಿಯೂ ಈ U-U- ಶ್ರುತಿಯೇ ಹೆಚ್ಚು :-

	U-   U-  

ಅಗ್ನಿಮೀಳೇ       ಪುರೋಹಿತಂ     (ಗಾಯತ್ರೀ) 

  ಆದಿ           ಅಂತ್ಯ	

	ಇವುಗಳ ಪರಿಭಾವನೆಯಿಂದ ವೇದಮಂತ್ರಗಳಲ್ಲಿ ನಾಲ್ಕು ಅಕ್ಷರಗಳ ಗಣಗಳೂ ಅಂತ್ಯಕ್ಕೆ ಮಾತ್ರ ನಿಯಮಬದ್ಧತೆಯೂ ಇದ್ದಂತೆ ಭಾಸವಾಗುತ್ತದೆ. ವಾಲ್ಮೀಕಿಯ

	U - -	U - U -

ಮಾ ನಿಷಾದ	ಪ್ರತಿಷ್ಠಾಂತ್ವಂ	ಅಗಮ ಃ ಶಾಶ್ವತೀಸ್ಸಮಾ:

ಯತ್ಕ್ರೌಂಚ   ಮಿಥುನಾದೇಕ	ಮವಧೀ ಃ ಕಾಮಮೋಹಿತಮ್

	ಇಲ್ಲಿ ಆಗಿರುವ ನ್ಯೂನತ್ವವನ್ನು ಈಗ ಸುಲಭವಾಗಿ ಗುರುತಿಸ ಬಹುದು. ವೇದದಲ್ಲಿ ಪ್ರಚುರವಾಗಿದ್ದ U-U- ಎಂಬ ಅಂತ್ಯಶ್ರುತಿಯನ್ನು ಇಲ್ಲಿ 2 ಮತ್ತು 4ನೆಯ ಪಾದಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಲಾಗಿದೆ. ಅದಕ್ಕೆ ಪರ್ಯಾಯವಾಗಿ 1 ಮತ್ತು 3ನೆಯ ಪಾದಗಳಲ್ಲಿ 5,6,7ನೆಯ ಅಕ್ಷರಗಳು U- -  ರೀತಿ ಬಂದಿವೆ. ಮುಖ್ಯ ವ್ಯತ್ಯಾಸ 7ನೆಯ ಅಕ್ಷರದ್ದು. 7ನೆಯ ಅಕ್ಷರ ಗುರುವೇ ಆಗಿರಬೇಕೆಂಬ ನಿಯಮ ಹೊಸದಾಗಿ ಬಂದು ಸೇರಿತು. ಈಗ ಅನುಷ್ಟುಭ್ ಛಂದಸ್ಸೇ ಪಾದಬದ್ಧ ಮತ್ತು ಅಕ್ಷರಸಮವಾಯಿತಷ್ಟೇ ಅಲ್ಲ; ತಂತ್ರೀಲಯ ಸಮನ್ವಿತವೂ ಆಯಿತು.

	ಇದೇ ರೀತಿ 11 ಅಕ್ಷರದ ತ್ರಿಷ್ಟುಭ್ ಅಲ್ಪಸಂಸ್ಕಾರದಿಂದ ಮಾರ್ಪಟ್ಟು ಸಂಸ್ಕøತದಲ್ಲಿ ಉಪಜಾತಿಯೆನಿಸುವ ಇಂದ್ರವಜ್ರಾ ಉಪೇಂದ್ರವಜ್ರಾ ವೃತ್ತಗಳಾದುವು :

 - -   U - - UU      - U - U 
	ಸರ್ವೋಪಮಾದ್ರವ್ಯಸ ಮುಚ್ಚಯೇನ (ಕುಮಾರಸಂಭವ 1.49)  ಇಲ್ಲಿಯೂ ತ್ರಿಷ್ಟುಪ್ಪಿನ ಮಧ್ಯ ಮತ್ತು ಅಂತ್ಯ ಅಕ್ಷರಗಳು ಉಳಿದೇ ಇವೆ. ಯತಿಸ್ಥಾನ ಅನಿಯತ.  ಆದಿಯ ಒಂದಕ್ಷರಕ್ಕೆ ಇಲ್ಲಿಯೂ ನಿಯಮವಿಲ್ಲ, ಉಳಿದ ನಾಲ್ಕಕ್ಷರಗಳು (-U - -) ಅಂತ್ಯದಂತೆ ಆದಿಯಲ್ಲಿಯೂ ನಿಯಮಬದ್ಧವಾಗಿವೆ. ಅಷ್ಟೇ ವ್ಯತ್ಯಾಸ.

ಹಾಗೆಯೇ 12 ಅಕ್ಷರದ ಜಗತಿ ಸಂಸ್ಕøತದಲ್ಲಿ ವಂಶಸ್ಥ ಹಾಗೂ ಇಂದ್ರವಂಶಾ ವೃತ್ತಗಳ ಸ್ವರೂಪವನ್ನು ತಾಳಿತೆನ್ನಬಹುದು. ಉದಾ:-
U -       U - -    UU  - -
ಶ್ರಿಯಃ  ಕುರೂಣಾ  ಮಧಿಪಸ್ಯ  ಪಾಲನೀಂ (ಕಿರಾತಾರ್ಜುನೀಯ, 1.1) ಇದು ವಂಶಸ್ಥವೃತ್ತ; ಆದಿವರ್ಣ ಲಘುವಾಗುವ ಬದಲು ಗುರುವಾದರೆ ಇದೇ ಇಂದ್ರವಂಶಾ ವೃತ್ತ.

	ಮಹಾಕಾವ್ಯಕಾರರೆಲ್ಲರಿಗೂ ಶ್ಲೋಕವನ್ನು ಬಿಟ್ಟರೆ ಅತ್ಯಂತ ಪ್ರಿಯವಾದ ವೃತ್ತಗಳೆಂದರೆ ಉಪಜಾತಿ, ವಂಶಸ್ಥ, ಇಂದ್ರವಂಶಾಗಳೇ ಆಗಿರುವುದಕ್ಕೆ ಇವುಗಳ ಪ್ರಾಚೀನಪರಂಪರೆಯೇ ಕಾರಣ. ಇದೇ ಜಗತೀಛಂದಸ್ಸಿನಲ್ಲಿ ಕಡೆಯ U-U- ಶ್ರುತಿಯನ್ನು ಹಾಗೆಯೇ ಇಟ್ಟುಕೊಂಡು ಪೂರ್ವಾಕ್ಷರಗಳನ್ನು UUU-, UU-U ಎಂದು ಮಾರ್ಪಡಿಸಿದರೆ ದ್ರುತವಿಲಂಬಿತ ವೃತ್ತ; ಇದನ್ನೇ UUU-,  UUU- ಎಂದು ಕಡೆಯಲ್ಲಿ ಎರಡನ್ನು ಬದಲಿಸಿದರೆ ಇದು ಮತ್ತ ಕೋಕಿಲ ವೃತ್ತ. ಈ ಛಂದೋವಿಕಾಸ ಕ್ಷೇಮೇಂದ್ರನ ದೃಷ್ಟಿಗೂ ಬಿದ್ದಿತೆಂಬುದು ಗಮನಾರ್ಹ:-

	ಮಧ್ಯದಲ್ಲಿ ಅಕ್ಷರಗಳನ್ನು ಕೂಡಿಸಿದರೆ ಶಾಲಿನಿಯೇ ಮಂದಾಕ್ರಾಂತವಾಗುತ್ತದೆ, ಕಡೆಗೆ ಒಂದಕ್ಷರವನ್ನು ಸೇರಿಸಿದರೆ ಉಪೇಂದ್ರವಜ್ರವೇ ವಂಶಸ್ಥವೆನಿಸುತ್ತದೆ.

	ಉದಾಹರಣೆಗೆ : ತನ್ವೀ ಶ್ಯಾಮಾ ಶಿಖರಿದಶನಾ ಪಕ್ವಬಿಂಬಾಧರೋಷ್ಠೀ, ಇದು ಮಂದಾಕ್ರಾಂತಾವೃತ್ತ. ಅದೇ ತನ್ವೀ ಶ್ಯಾಮಾ ಪಕ್ವಬಿಂಬಾಧರೋಷ್ಠೀ, ಇದು ಶಾಲಿನೀವೃತ್ತ. ಆದ್ದರಿಂದಲೇ ಇಲ್ಲಿ 4,10 ಈ ಸ್ಥಾನಗಳಲ್ಲಿ ಯತಿ ನಿಯತವೆನ್ನಲಾಗಿದೆ.

	ವೈದಿಕ ಛಂದಸ್ಸುಗಳ ಜೊತೆಗೆ ಪ್ರಾಕೃತದ ಛಂದಸ್ಸುಗಳಿಂದಲೂ ಸಂಸ್ಕøತ ವೃತ್ತಜಾತಿಗಳ ವಿಕಾಸಕ್ಕೆ ಅನುವು ದೊರೆಯಿತು. ಪ್ರಾಕೃತದಲ್ಲಿ ಗುರು ಲಘುಗಳ ಸ್ಥಾನ ನಿಯಮದ ಬದಲು ಸಮಮಾತ್ರೆಗಳಿಂದಾದ ಮಾತ್ರಾಗಣಗಳ ಉಪಯೋಗ ಹೆಚ್ಚಾಗಿತ್ತು. ಉದಾಹರಣೆಗೆ :

	-   -UU   UU  U - U -        UU  - -U    U - U -U -

	ಸೀ ಓಜಗ ಪಡಿ ದುಗುಂಛಿಣೋ ಅಪ ರಿನ್ನಸ್ಸ  ಲವಾವಸಪ್ಪಿಣೋ (ವೈತಾಲೀಯ) ಇದೇ ಮಾತ್ರಾಗಣಗಳ ಓಟವನ್ನು ಸಂಸ್ಕøತದ ವೈತಾಲೀಯ ದಂತೆ ವಿಯೋಗಿನೀ ಪುಷ್ಪಿತಾಗ್ರ ಅಪರವಕ್ತ್ರ ಮುಂತಾದ ಇತರ ವೃತ್ತಗಳಲ್ಲಿಯೂ ಕಾಣಬಹುದಾಗಿದೆ;

ಉದಾಹರಣೆಗೆ:-

UU-    UU -        U -U - U  U-         -  UU - U- U -

ವಿಷಮ ಪ್ಯಮೃತಂ   ಕ್ವಚಿದ್ಭವೇಪ ಮೃತಂ   ವಾ ವಿಷಮೀಶ್ವರೇಚ್ಛಯಾ (ವಿಯೋಗಿನಿ)

	ಮಾತ್ರಾಗಣಗಳಿಂದಾದ ಆರ್ಯಾಪ್ರಕಾರಗಳಂತೂ ಪ್ರಾಕೃತದ ಪ್ರಭಾವವನ್ನು ಸ್ಪಷ್ಟವಾಗಿ ನಿರ್ದೇಶಿಸುತ್ತವೆ. ಇವೆರಡನ್ನೂ ಹಿಡಿತದಲ್ಲಿ ಡುವ ಸಂಸ್ಕøತ ಪದ್ಯದ ಮೂಲನಿಯಮವೆಂದರೆ ಗುರುಲಘುಗಳ ಸ್ಥಾನನಿಯಮ.

	ಸಾಂಪ್ರದಾಯಿಕ ಛಂದೋವಿಚಿತಿಗಳಲ್ಲಿ ಸಂಸ್ಕøತವೃತ್ತಗಳನ್ನು ವಿಭಾಗಿಸಲು ಉಪಯೋಗಿಸುವುದು ತ್ರಿತ ಅಥವಾ ಮೂರು ಅಕ್ಷರಗಳ ಗಣಗಳನ್ನು ಮಾತ್ರ. ಇವುಗಳ ಗುರು ಲಘು ವಿನ್ಯಾಸ ಪ್ರಕಾರಗಳನ್ನೆಲ್ಲ ಒಟ್ಟು ಯ (U--), ಮ (- - -) ರ (-U -) ಜ (U - U), ಭ (-UU), ನ (UUU), ಸ  (UU -) ಈ ಏಳು ಗುಂಪುಗಳಲ್ಲಿ ತರುತ್ತಾರೆ.

	- ಗುರುವಿಗೂ U ಲಘುವಿಗೂ ಚಿಹ್ನೆ. ಇವುಗಳನ್ನು ನೆನಪಿನಲ್ಲಿಡಲು ಯಮಾತಾರಾಜಭಾನಸಲಗಂ ಎಂಬ ಪದಾವಲಿ ಉಪಯುಕ್ತವಾಗುತ್ತದೆ (ಲ ಲಘು; ಗ ಗುರು). ಒಟ್ಟು ಎಲ್ಲ ಛಂದಸ್ಸುಗಳಲ್ಲೂ ಎಷ್ಟು ಜಾತಿಯ ವೃತ್ತ ಪ್ರಕಾರಗಳಾಗಬಹುದೆಂಬು ದನ್ನು ಲೆಕ್ಕ ಮಾಡಿ ಪ್ರಾಕೃತಪೈಂಗಲದಲ್ಲಿ 13,42,17,726 ಎಂದು ಹೇಳಿದೆ. ಹೆಸರಿಸಿರುವ ನೂರಾರಲ್ಲಿಯೂ ಕವಿಪ್ರಿಯವಾದವು ಹತ್ತಾರು ಮಾತ್ರ. ಈಗಾಗಲೇ ಮುಖ್ಯವಾದ ಕೆಲವನ್ನು ಗಮನಿಸಿದೆ. ಮಹಾಕಾವ್ಯಗ ಳಲ್ಲಿ ಪ್ರಾಚುರ್ಯವಿಲ್ಲದಿದ್ದರೂ ಭಾವಗೀತೆ ಹಾಗೂ ನಾಟಕಗಳಲ್ಲಿ ವಿಶೇಷವಾಗಿ ಬರುವ ಕೆಲವು ವೃತ್ತಗಳನ್ನೀಗ ಗಮನಿಸಬಹುದು :

	ಶಾರ್ದೂಲವಿಕ್ರೀಡಿತದ ಲಕ್ಷಣ :

	ಸೂರ್ಯಾಶ್ವೈರ್ಮಸಜಸ್ತತಾಃ ಸಗುರವಃ ಶಾರ್ದೂಲವಿಕ್ರೀಡಿತಮ್ (`ಛಂದೋಮಂಜರಿ ಲಕ್ಷಣವಾಕ್ಯವೇ ವೃತ್ತಕ್ಕೆ ಲಕ್ಷ್ಯವೂ ಆಗಿರುವುದನ್ನು ಗಮನಿಸಬೇಕು): ಇಲ್ಲಿ ಇದನ್ನು ಪ್ರಸ್ತಾರ ಹಾಕಿ ತೋರಿಸುವುದು ಹೀಗೆ —

- -  - U      U  - U   -U U U -    - -     U-      - U -
ವೇದಾಂತೇಷು ಯಮಾಹು ರೇಕಪುರುಷಂ  ವ್ಯಾಪ್ಯ  ಸ್ಥಿತಂ  ರೋದಸೀ	 ಲಕ್ಷಣದಲ್ಲಿ “ಸೂರ್ಯ-12 (ಹೋಲಿಸಿ - ದ್ವಾದಶಾದಿತ್ಯ), ಅಶ್ವ — 7 (ಸಪ್ತಾಶ್ವ) ಈ ಸ್ಥಾನಗಳಲ್ಲಿ ಯತಿಯೆಂಬ ನಿರ್ದೇಶವೂ ಬಂದಿದೆ. ಇದು 19 ಅಕ್ಷರಗಳ ಅತಿಧೃತಿ ಛಂದಸ್ಸು. 21 ಅಕ್ಷರಗಳ ಸ್ರಗ್ಧರಾವೃತ್ತವೂ ಭಾವಾಭಿವ್ಯಕ್ತಿಗೆ ಉತ್ತಮ ಸಾಧನವಾಗುತ್ತದೆ.

-    - -     -U - -  UUU  UUU-     -  U - -     U - -    
ಯಾ ಸೃಷ್ಟಿಃ  ಸ್ರಷ್ಟುರಾದ್ಯಾ  ವಹತಿ  ವಿಧಿಹುತಂ  ಯಾ ಹವಿರ್ಯಾ ಚ ಹೋತ್ರೀ ಇಲ್ಲಿ ಯತಿ ಪ್ರತಿ 7 ಅಕ್ಷರಗಳಿಗೆ.	
U  UU U UU    - -      -U - -       U - -
ನ ಖಲು ನ ಖಲು ಬಾಣ ಃ ಸಂನಿಪಾತ್ಯೋ  ಯಮಸ್ಮಿನ್  
U -       - - - -        U U U  U U   - -    U   U  U - 
                            - ಇದು ಮಾಲಿನೀ
	ಗುಣಾ ಃ ಪೂಜಾಸ್ಥಾನಂ  ಗುಣಿಷು   ನ ಜ ಲಿಂಗಂ  ನ  ಚ ವಯ ಃ 
- -U-U         UU- UU  - U  - -
                                    ಇದು ಶಿಖರಣೀ
	ನಿದ್ರಾವಶೇನ  ಭವತಾಪ್ಯನವೇಕ್ಷ್ಯ  ಮಾಣಾ - ಇದು ವಸಂತತಿಲಕಾ
	ನಿಯತಾಕ್ಷರಗಣದಂತೆ ತಾಳವೂ ಕೆಲವು ವೃತ್ತಗಳ ಉದಯಕ್ಕೆ ಕಾರಣವಾಗಿದ್ದುದನ್ನು ಕ್ಷೇಮೇಂದ್ರ ಹೇಳಿದ್ದಾನೆ(ಸೂ.ವೃ.ತಿ.2.9). ದೋಧಕದಲ್ಲಿ ಮೂರು ಮೂರಕ್ಕರಗಳಿಗೆ ಯತಿ ತಪ್ಪಿದರೆ ತಾಳ ಹೋಗುತ್ತದೆನ್ನುತ್ತಾನೆ (ಇಂಥದೇ ಇನ್ನೊಂದು ವೃತ್ತ ಭುಜಂಗಪ್ರಯಾತ).
ಉದಾಹರಣೆಗೆ :
-       U U    -    U U    -    UU      - -
ಹಾ  ನೃಪ  ಹಾ ಬುಧ  ಹಾ  ಕವಿ  ಬಂಧೋ
	ಇಲ್ಲಿ ಸರಿಯಾಗಿ ತಾಳಕ್ಕೆ ಕೂಡುವಂತೆ ಚತುರ್ಮಾತ್ರಾ ಗಣ 4 ಇವೆ. ಈ ತಾಳ ಹಾಸ್ಯರಸಕ್ಕೆ ಮಾತ್ರ ಅನುಗುಣವೇ ಹೊರತು ರಾಜಪ್ರಶಸ್ತಿಗಲ್ಲವೆಂದು ಮಮ್ಮಟನ ಹೇಳಿಕೆ (ಕಾ.ಪ್ರ-7).
	ಇದುವರೆಗೆ ಗಮನಿಸಿದ ವೃತ್ತಗಳೆಲ್ಲ ಹೆಚ್ಚಾಗಿ ಸಮವೃತ್ತಗಳು; ಎಂದರೆ ನಾಲ್ಕು ಪಾದಗಳಲ್ಲೂ ಒಂದೇ ಸಂಖ್ಯೆಯ ಅಕ್ಷರಗಳಿರತಕ್ಕವು. ಎರಡೆರಡು ಪಾದಗಳು ಮಾತ್ರ ಸಮಾನವಾಗಿದ್ದರೆ ಅರ್ಧಸಮವೆಂದೂ ಪಾದಗಳು ಭಿನ್ನವಾಗಿದ್ದರೆ ವಿಷಮವೆಂದೂ ವೃತ್ತಗಳಿಗೆ ಹೆಸರುಂಟಾಗುತ್ತದೆ. ವೈತಾಲೀಯ, ಪುಪ್ಪಿತಾಗ್ರಾ ಅರ್ಧಸಮ ವೃತ್ತಗಳು. ಬಳಕೆಯಲ್ಲಿರುವ ವಿಷಮವೃತ್ತಗಳು ಕಡಿಮೆ.
	ಈ ಅಕ್ಷರವೃತ್ತಗಳಲ್ಲದೆ ಸಂಸ್ಕøತ ಸಾಹಿತ್ಯದಲ್ಲಿ ಕೆಲವು ಶುದ್ಧ ಮಾತ್ರಾವೃತ್ತಗಳೂ ಬಳಕೆಯಲ್ಲಿವೆ. ಅವಕ್ಕೆ ಜಾತಿಯೆಂದು ಪಾರಿಭಾಷಿಕ ಹೆಸರು. ವೈತಾಲೀಯವನ್ನು ಜಯಕೀರ್ತಿ ಜಾತಿಯಲ್ಲಿಯೇ ಸೇರಿಸುತ್ತಾನೆ. ಜಾತಿಗಳಲ್ಲೆಲ್ಲ ಆರ್ಯೆ ಮುಖ್ಯವಾದುದು. ಇದರ ಲಕ್ಷಣ: ಮೊದಲರ್ಧದಲ್ಲಿ ಚತುರ್ಮಾತ್ರೆಯ 7 ಗಣಗಳು, ಮೇಲೊಂದು ಗುರು; ವಿಷಮಸ್ಥಾನಗಳಲ್ಲಿ (1,3,5,7 ನೆಯ ಗಣಗಳಲ್ಲಿ) ಜ ಗಣವಿರಬಾರದು. 6ನೆಯದು U - U, ಇಲ್ಲವೆ  U U U U ಇರಬೇಕು, ಯತಿ ಇಲ್ಲೇ ಮೊದಲ ಲಘುವಿನ ಮುಂದೆ. ಉತ್ತರಾರ್ಧದಲ್ಲಿ 6ನೆಯ ಗಣಕ್ಕೆ 1 ಲಘು ಮಾತ್ರ (ಅಂದರೆ ಒಟ್ಟಿನಲ್ಲಿ 27 ಮಾತ್ರೆಗಳು). ಯತಿ ನಾಲ್ಕನೆಯ ಗಣದ ಮುಂದೆ ಬರುತ್ತದೆ.	ಆರ್ಯೆಗೆ ಉದಾಹರಣೆ :

-  -    - - UU -   UUUU-   -U   - U    - -      -
ದೂರಂ  ಮುಕ್ತಾಲತಯಾ  ಬಿಸಸಿತಯಾ  ವಿಪ್ರ  ಲೋಭ್ಯ ಮಾನೋ   ಮೇ
- U    UU    -U - -      - UU     - -  U-    - -      
ಹಂಸ  ಇವ  ದರ್ಶಿತಾಶೋ  ಮಾನಸ  ಜನ್ಮಾ ತ್ವಯಾ ನೀತಃ

	ಹಾಡುಗಳಿಗೆಲ್ಲ ಇದು ಸೂಕ್ತ ಛಂದಸ್ಸು. ಗೀತಿ, ಆರ್ಯಾಗೀತಿ ಮುಂತಾದವೆಲ್ಲ ಆರ್ಯೆಯ ವಿಸ್ತøತರೂಪಗಳು ಮಾತ್ರ. ಪ್ರಾಕೃತದ ಸ್ಕಂಧಕ, ಕನ್ನಡದ ಕಂದ, ಸಂಸ್ಕøತದ ಆರ್ಯಾಗೀತಿ ಎಲ್ಲವೂ ಛಂದೋದೃಷ್ಟಿಯಿಂದ ಒಂದೇ.	(ಕೆ.ಕೆ.)

	ಸಂಸ್ಕøತ ಲಾಕ್ಷಣಿಕರ ದೃಷ್ಟಿಯಲ್ಲಿ ಛಂದಸ್ಸು ಕೆಡುವುದು ಅಪಶಬ್ದಕ್ಕೆ ಕಡಿಮೆಯಲ್ಲದ ದೊಡ್ಡ ದೋಷ. ಭಿನ್ನವೃತ್ತ, ಯತಿಭ್ರಷ್ಟ ಇವುಗಳನ್ನು ಆಲಂಕಾರಿಕರೆಲ್ಲರೂ ಏಕಕಂಠದಿಂದ ದೋಷಗಳೆಂದು ನಿರ್ಣಯಿಸಿದ್ದಾರೆ.

	ನಾಟಕ ಸಾಹಿತ್ಯ : ನಾಟಕಗಳ ಉದಯಕ್ಕೆ ಪೂರ್ವದಲ್ಲಿ ಚತುರ್ವೇದಗಳಿದ್ದು, ಅವುಗಳ ಒಂದೊಂದು ಅಂಶ ನಾಟಕದಲ್ಲಿ ಕೂಡಿಕೊಂಡಿತು ಎಂಬುದು ಸಾಮಾನ್ಯವಾದ ತಿಳಿವಳಿಕೆ. ಈ ಬಗ್ಗೆ ಒಂದು ಕಥೆಯಿದೆ. ಲೋಕದಲ್ಲೆಲ್ಲ ಕಾಮಕ್ರೋಧಾದಿಗಳು ಹೆಚ್ಚಿ ಉಂಟಾದ ದುಃಖದ ಪೀಡೆಯನ್ನು ಮರೆಯಲು ಏನಾದರೂ ಉಪಾಯವುಂಟೆ ಎಂದು ಹುಡುಕುತ್ತ ಹೊರಟ ಇಂದ್ರಾದಿಗಳು ಬ್ರಹ್ಮನ ಬಳಿಗೆ ಬಂದು, ದೃಶ್ಯವೂ ಶ್ರವ್ಯವೂ ಆಗಿ, ಸರ್ವರಿಗೂ ರಂಜಕವಾಗುವಂಥ ಒಂದು ಕ್ರೀಡನಕ ನೀಡು ಎಂದು ಬೇಡಿಕೊಂಡರಂತೆ. ಆತ ಋಗ್ವೇದದಿಂದ ಪಾಠ್ಯವನ್ನೂ ಯಜುರ್ವೇದದಿಂದ ಅಭಿನಯವನ್ನೂ ಸಾಮವೇದದಿಂದ ಗಾನವನ್ನೂ ಅಥರ್ವವೇದದಿಂದ ರಸಗಳನ್ನೂ ತೆಗೆದು, ಕೂಡಿಸಿ ನಾಟ್ಯ ಸೃಷ್ಟಿಸಿದನಂತೆ. ಮುಂದೆ ಭರತ ತನ್ನ ಪುತ್ರರನ್ನೂ ಅಪ್ಸರೆಯರನ್ನೂ ನಟನಟಿಯರಾಗಿ ಮಾಡಿ, ಇಂದ್ರಧ್ವಜದ ಉತ್ಸವದಲ್ಲಿ ಅಮೃತಮಂಥನವೇ ಮೊದಲಾದ ನಾಟಕಗಳನ್ನು ಆಡಿಸಿದನಂತೆ. ಪ್ರೇಕ್ಷಕರಾಗಿದ್ದವರು ದೇವದಾ ನವರು. ದಾನವರಿಗೆ ತಮ್ಮ ಅಪಜಯದ ಪ್ರದರ್ಶನದಿಂದ ಅವಮಾನವಾಗಿ ಅವರು ಆಕ್ಷೇಪಣೆ ಎತ್ತಿದಾಗ ಬ್ರಹ್ಮ ನಾಟಕದ ಅನುಕರಣ ಸ್ವರೂಪ ವಿವರಿಸಿ ಅವರನ್ನು ಸಮಾಧಾನ ಮಾಡಿದನಂತೆ. ಈ ವೃತ್ತಾಂತ ಕಾಲ್ಪನಿಕವೆನಿಸಿ ಇದರಿಂದ ಐತಿಹಾಸಿಕ ಸಂಗತಿಗಳೇನೂ ತಿಳಿಯುವುದಿಲ್ಲ.

	ಆಧುನಿಕ ವಿದ್ವಾಂಸರು ಈ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ; ಹತ್ತಾರು ವಾದಗಳನ್ನು ಮುಂದೆ ಮಾಡಿದ್ದಾರೆ. ಆದರೆ ಸಮಸ್ಯೆ ಇನ್ನೂ ನಿರ್ಣಾಯಕ ಘಟ್ಟಕ್ಕೆ ಬಂದಿಲ್ಲ. ಮುಖ್ಯವಾದ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಲಾಗಿದೆ.
	1. ಸಂಸ್ಕøತ ನಾಟಕದ ಪೂರ್ವರೂಪ ವೇದಕಾಲದಲ್ಲಿಯೇ ಇತ್ತು. ಋಗ್ವೇದದ ಸಂವಾದ ಸೂಕ್ತಗಳು (ಸರಮಾ-ಪಣಿ; ಯಮ-ಯಮಿ; ಪುರೂರವ-ಊರ್ವಶೀ ಇತ್ಯಾದಿ) ಯಜ್ಞಕ್ಕೆ ಅಂಗವಾಗಿ, ದೇವತೆಗಳ ಆರಾಧನೆಯ ಕಾಲದಲ್ಲಿ ಪಾತ್ರಧಾರಿಗಳಾದ ಋತ್ವಿಕ್ಕುಗಳಿಂದ ಪ್ರೇಕ್ಷಕರ ಮುಂದೆ ಅಭಿನಯಿಸಲ್ಪಡುತ್ತಿದ್ದಿರಬಹುದು. ಸಾಮಗಾನದ ಉಲ್ಲೇಖವಿರು ವಂತೆ ಅಥರ್ವವೇದದಲ್ಲಿ ಸ್ತ್ರೀಯರ ನರ್ತನವೂ ಉಕ್ತವಾಗಿದೆ. ಹೀಗೆ ವೇದಕಾಲದ ಸಂವಾದ, ನರ್ತನ, ಗಾನಗಳ, ಸಮ್ಮಿಳನದಿಂದ ಒಂದು ರೀತಿಯ ಧಾರ್ಮಿಕ ನಾಟಕಗಳ ಆವಿರ್ಭಾವ ಆಗಿರಬೇಕು. ಇದಕ್ಕೆ ಪೋಷಕವಾಗಿ, ಈ ವಾದದ ಪುರಸ್ಕøತರು ಸುವರ್ಣಾಧ್ಯಾಯ, ಮಹಾವ್ರತ, ಅಶ್ವಮೇಧ ವಿಧಿಗಳಲ್ಲಿ ಬರುವ ನಾಟಕೀಯ ಹಾಗೂ ವಿಡಂಬನಾಂಶಗಳು ಇತ್ಯಾದಿಗಳನ್ನು ಉಲ್ಲೇಖಿಸುತ್ತಾರೆ. ಹೀಗೆ ಮ್ಯಾಕ್ಸ್‍ಮ್ಯುಲರ್, ಹರ್ಟೆಲ್, ಓಲ್ಡೆನ್‍ಬರ್ಗ್ ಮೊದಲಾದ ಅನೇಕ ಜರ್ಮನ್ ವಿದ್ವಾಂಸರು ಸಂಸ್ಕøತ ನಾಟಕದ ಧಾರ್ಮಿಕ ಪ್ರಾದುರ್ಭಾವ ಸಾಧಿಸಲು ಯತ್ನಿಸಿದ್ದರೂ ಇವರ ಪ್ರಯತ್ನ ಯಶಸ್ವಿಯಾಯಿತೆಂದು ಹೇಳುವಂತಿಲ್ಲ. ಏಕೆಂದರೆ ಸಂಸ್ಕøತ ನಾಟಕದ ಸ್ವರೂಪ ಪರಿಶೀಲಿಸಿದರೆ, ಅದರಲ್ಲಿ ಧಾರ್ಮಿಕಾಂಶಗಳಿಗಿಂತ ಲೌಕಿಕ ಹಾಗೂ ಮನರಂಜಕಾಂಶಗಳಿಗೆ ಪ್ರಾಶಸ್ತ್ಯವಿರುವುದು ಸ್ಪಷ್ಟ. ನಾಂದೀ ಮುಂತಾದಡೆಗಳಲ್ಲಿರುವ ಭಕ್ತಿಗಾದರೂ ವೈದಿಕ ದೇವತೆಗಳ ಅಥವಾ ಕರ್ಮಗಳೊಡನೆ ಯಾವುದೇ ಸಮೀಪದ ಸಂಬಂಧ ಕಾಣದು. ವೈದಿಕ ಯುಗಪ್ರಪಂಚಕ್ಕೂ ಸಂಸ್ಕøತ ನಾಟಕ ಪ್ರಪಂಚಕ್ಕೂ ಬಲು ದೂರ ಎನಿಸುತ್ತದೆ. ನಾಟಕದ ಆವಿರ್ಭಾವಕ್ಕೆ ಅಗತ್ಯವಾದ ಬೇರೆ ಬೇರೆ ಅಂಗಗಳು ವೇದಕಾಲದಲ್ಲೇ ಸಿದ್ಧವಾಗಿದ್ದು ವೆಂದು ಹೇಳಬಹುದೇ ವಿನಾ, ಅವು ಕೂಡಿ ಒಂದು ರೀತಿಯ ನಾಟಕಗಳ ಸ್ವರೂಪ ತಾಳಿದ್ದುವೆನ್ನಲು ಆಧಾರ ಸಾಲದು. ಋಗ್ವೇದದ ಸಂವಾದ ಸೂಕ್ತಗಳಿಗೆ ಯಜ್ಞ-ಕ್ರಿಯೆಯಲ್ಲಿ ವಿನಿಯೋಗ ಕೂಡ ಅಸಿದ್ಧ. ಆದ್ದರಿಂದಲೇ, ನಾಟಕದ ಕೆಲ ಅಂಶಗಳು ಧಾರ್ಮಿಕ ಜನ್ಯವೆಂದೂ ಮಿಕ್ಕ ಲೌಕಿಕಾಂಶಗಳು ಜನಪ್ರಿಯ ಗೊಂಬೆ ಆಟಗಳ ಅಥವಾ ಛಾಯಾನಾಟಕಗಳ ಪ್ರಭಾವದಿಂದ (ಸೂತ್ರಧಾರ ಸೂತ್ರದಬೊಂಬೆ ಆಡಿಸುವವ) ಸೇರಿದವೆಂದೂ ಹಿಲ್ಲೆಬ್ರಾಂಟ್, ಸ್ಟೆನ್‍ಕೋನೌ ಮೊದಲಾದವರು ಊಹಿಸುತ್ತಾರೆ. ಈ ಊಹೆಗೂ ಆಧಾರ ಸಾಲದು. ಯಾವುದೋ ಕಾಲಾಂತರದ ಸನ್ನಿವೇಶವನ್ನು ಪ್ರಾಚೀನಕಾಲಕ್ಕೆ ನೇರವಾಗಿ ಅನ್ವಯಿಸುವುದು ಸಾಧುವಲ್ಲ. ನಾಟಕ ಬಹಳ ಹಿಂದೆಯೇ ಉದಿಸಿದ ಮತ್ತೊಂದು ದೇಶವೆಂದರೆ ಗ್ರೀಸ್. ಅಲ್ಲಿ ಆರಂಭದಲ್ಲಿ ಧಾರ್ಮಿಕ ಆವರಣವಿತ್ತೆಂದ ಮಾತ್ರಕ್ಕೆ ಅದೇ ತರ್ಕ ಭಾರತಕ್ಕೂ ಅನ್ವಯಿಸಲೇ ಬೇಕೆಂಬ ನಿಯಮವಿಲ್ಲ. ಆದರೆ ಪ್ರಾಯಿಕವಾಗಿ ಪಾಶ್ಚಾತ್ಯ ವಿದ್ವಾಂಸರು ಈ ಮನೋಭೂಮಿಕೆಯಿಂದಲೇ ಸಂಶೋಧನೆಗೆ ಹೊರಟಂತೆ ಕಾಣುತ್ತದೆ.

	2. ಪುರಾಣೇತಿಹಾಸಗಳ ವಾಚನದ ಪರಿಣಾಮವಾಗಿಯೇ ನಾಟಕಗಳು ಹುಟ್ಟಿದುವು ಎಂದು ಪ್ರಸಿದ್ಧ ವಿದ್ವಾಂಸರಾದ ಕೀತ್ ಮತ್ತು ಲೂಡರ್ಸ್ ಮೊದಲಾದವರ ವಾದ. ರಾಮಾಯಣ ಮಹಾಭಾರತಗಳಲ್ಲಿ ನಟ, ನರ್ತಕ ಮುಂತಾದ ಶಬ್ದಗಳಿಗೆ ಕುಣಿಯುವವ ಎಂಬ ಸ್ಥೂಲಾರ್ಥವಿದೆ. ಆಡಿದ ನಾಟಕಗಳ ವಿಷಯ ಮೊದಲಿಗೆ ಸ್ಪಷ್ಟವಾಗಿ ಕಾಣುವುದು ಹರಿವಂಶದಲ್ಲಿ ಮಾತ್ರ (ಕ್ರಿ.ಶ. ಸು.2ನೆಯ ಶತಮಾನ). ಈ ಇತಿಹಾಸಗಳನ್ನು ವಾಚನ ಅಥವಾ ಕಥನ ಮಾಡುತ್ತಿದ್ದ ಉಲ್ಲೇಖಗಳು ಐದು, ಆರನೆಯ ಶತಮಾನಗಳ ತನಕವೂ ಸಿಕ್ಕುತ್ತವೆ. ಸಾಂಚೀಸ್ತೂಪದ ಚಿತ್ರವೊಂದರಲ್ಲಿ (ಕ್ರಿ.ಪೂ.) ಕಥಕರು ಬರುತ್ತಾರೆ. ಇವರ ಅಂಗಾಭಿನಯ ಸಂಗೀತದ ಹಿಮ್ಮೇಳಗಳೂ ಸ್ಪಷ್ಟವಾಗಿವೆ. ರಾಮಾಯಣದ ಕುಶಲವರೇ ಈ ಕಥಕರ ಪ್ರತಿನಿಧಿಗಳು; ಇವರೇ ಮುಂದೆ ಕುಶೀ-ಲವರೆನಿಸಿದರು. ಭಾರತ ಎಂಬ ಶಬ್ದವಾದರೂ ಮಹಾಭಾರತದ ಸೂತರನ್ನು ಸೂಚಿಸಬಲ್ಲದು.

	ಪಾಣಿನಿಯ ಅಷ್ಟಾಧ್ಯಾಯೀ ಸೂತ್ರಗಳಲ್ಲಿಯೇ ಶಿಲಾಲಿನ್ ಮತ್ತು ಕೃಶಾಶ್ವರ ನಟಸೂತ್ರಗಳ ಉಲ್ಲೇಖವುಂಟು. ಆದರೆ ಕ್ರಿ.ಪೂ. 5ನೆಯ ಶತಮಾನದ ನಟ ಶಬ್ದಕ್ಕೆ ಕುಣಿಯುವವ ಎಂಬ ಸಾಮಾನ್ಯಾರ್ಥವೇ ಸಹಜ. ನಿಜವಾಗಿ ನಾಟಕದ ಅಭಿನೇತೃಗಳನ್ನು ಆ ಶಬ್ದ ಬೋಧಿಸುತ್ತಿದ್ದರೆ, ಮುಂದೆ ಮಹಾಭಾಷ್ಯಕಾರನಾದ ಪತಂಜಲಿ ಜಘಾನ ಕಂಸಂ ಕಿಲ ವಾಸುದೇವ ಎಂಬ ಭೂತ ಕಾಲದ ಧಾತುವನ್ನೇಕೆ ಬಳಸುತ್ತಿದ್ದ. ಶೌಭಿಕರೂ ಗ್ರಾಂಥಿಕರೂ ಕಂಸವಧವನ್ನು ಜನರಿಗೆ ತಮ್ಮ ತಮ್ಮ ರೀತಿಯಿಂದ ತೋರಿಸುತ್ತಿದ್ದ ಉಲ್ಲೇಖವನ್ನು ಆತ ಮಾಡುತ್ತಾನೆ. ಕಣ್ಣ ಮುಂದೆ ನಿಜವಾಗಿ ಕಂಸನ ವಧೆ ನಡೆಯುತ್ತಿದ್ದರೆ (ನಾಟಕದಲ್ಲಿ ನಡೆಯುವಂತೆ), ಒಂದೇ ವರ್ತಮಾನಕಾಲ ಸಾಧುವಾಗುತ್ತಿದ್ದಿತು. ಆದರೆ ಗಚ್ಚಹನ್ಯತೇ ಕಂಸಃ ಎಂಬ ವರ್ತಮಾನ ಕಾಲ ಪ್ರಯೋಗದಂತೆ ಘಾನಿಷ್ಯತೇ ಕಂಸಃ ಕಿಂ ಗತೇನ, ಹತಃ ಕಂಸಃ ಎಂಬ ಭವಿಷ್ಯತ್ ಮತ್ತು ಭೂತಕಾಲ ಪ್ರಯೋಗಗಳನ್ನೂ ಪತಂಜಲಿ ತೋರಿಸುತ್ತಾನೆ. ಶೌಭಿಕರು ಅಭಿನಯಕಾರರಾದರೆ, ಗ್ರಾಂಥಿಕರು ಪಾಠಕರು; ಇವರಿಬ್ಬರೂ ಕೂಡಿ ಜನರಿಗೆ ಕಂಸವಧಾದಿಗಳನ್ನು ತೋರಿಸುತ್ತಿದ್ದರು. ಇದೇ ಸಂಸ್ಕøತ ನಾಟಕದ ನಿಜವಾದ ಮೂಲ. ಆದರೆ ಶೌಭಿಕಗ್ರಾಂಥಿಕರ ಕಾರ್ಯ ಧಾರ್ಮಿಕ ಮೂಲವೆಂಬುದು ಮನನೀಯ. ಇವರು ತಮ್ಮಲ್ಲಿ ಎರಡು ಗುಂಪುಗಳನ್ನು ಮಾಡಿಕೊಂಡು, ಕೃಷ್ಣನ ಗುಂಪಿನವರನ್ನು ರಕ್ತಮುಖರನ್ನಾಗಿಯೂ ಕಂಸನ ಕಡೆಯವರನ್ನು ಕಾಲಮುಖರಾಗಿಯೂ ತೋರಿಸಿಕೊಳ್ಳುವ ವಿಷಯ ವಸಂತ-ಗ್ರೀಷ್ಮಗಳು (ಬೆಳಕು) ಶೀತಕಾಲದ ದೈತ್ಯನ ಮೇಲೆ ಪಡೆಯುವ ವಿಜಯದ ಸಂಕೇತ ಎನ್ನಬಹುದು. ಪತಂಜಲಿಯ ಕಾಲಕ್ಕೆ ಈ ಸಂಕೇತದ ಅರ್ಥ ಲುಪ್ತವಾಗಿದ್ದರೂ ಸಂಸ್ಕøತ ನಾಟಕದ ಆರಂಭಕಾಲದಲ್ಲಿ ಲುಪ್ತವಾಗಿದ್ದಿರಲಾರದು.

	ಮೇಲಿನ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಕೃಷ್ಣಮಾಚಾರ್ಯ, ದಾಸ್‍ಗುಪ್ತ ಮೊದಲಾದ ಭಾರತೀಯ ವಿದ್ವಾಂಸರು ತೋರಿಸಿದ್ದಾರೆ. ಶೌಭಿಕರು ಮೂಕವಾಗಿ ಕಂಸವಧೆಯ ಅಥವಾ ಬಲಿಬಂಧನದ ಕಾರ್ಯ ಮಾಡುತ್ತಿದ್ದ ನಟರಲ್ಲ; ಕೈಯಟ ವಿವರಿಸುವಂತೆ ಕಂಸಾನುಕಾರಿಗಳಾದ ನಟರಿಗೆ ಪಾಠ ಕಲಿಸುವ ಉಪಾಧ್ಯಾಯರು (ಕಂಸಾನುಕಾರಿಣಾಂ ನಟಾನಾಂ ವ್ಯಾಖ್ಯಾನೋಪಾಧ್ಯಾಯಾಃ). ಮಹಾಭಾಷ್ಯದಲ್ಲಿಯೇ ನಟ-ಶಿಕ್ಷಕರಾದ ಶೌಭಿಕ; ವಾಚಕರಾದ ಗ್ರಾಂಥಿಕರಂತೆ ರಂಗಸ್ಥಳ ಮತ್ತು ನಟರ ನಿರ್ದೇಶವೂ ಇದೆಯಾಗಿ, ಪತಂಜಲಿಯ ಕಾಲಕ್ಕೆ ನಾಟಕಗಳು ಪೂರ್ಣರೂಪವನ್ನು ತಳೆದಾಗಿತ್ತು ಎನ್ನಬೇಕು. ಕೀತ್ ಅವರು ಹೇಳುವ ಸಾಂಕೇತಿಕ ಆರಾಧನಾರ್ಥಕ್ಕೆ ಅವಕಾಶವಿಲ್ಲ. ಮಹಾವ್ರತದಲ್ಲಿ ಬರುವ ಬ್ರಾಹ್ಮಣ-ಬ್ರುವನೇ ವಿದೂಷಕನ ಪಾತ್ರಕಲ್ಪನೆಗೆ ಮೂಲ ಎಂದು ಕೀತ್ ಅವರು ಹೇಳುವುದಕ್ಕೂ ಆಧಾರ ಸಾಲದು.

	3. ಸಂಸ್ಕøತ ನಾಟಕದ ಉತ್ಪತ್ತಿಗೆ ಗ್ರೀಕ್ ಪ್ರಭಾವ ಕಾರಣವಿರ ಬಹುದೆ? ಇದು ಇನ್ನೊಂದು ಸಮಸ್ಯೆ. ಪಾಶ್ಚಾತ್ಯ ವಿದ್ವಾಂಸರೆಲ್ಲರೂ ಪ್ರಾಯಿಕವಾಗಿ ಒಂದಿಲ್ಲೊಂದು ರೀತಿಯಿಂದ ಗ್ರೀಕ್ ಪ್ರಭಾವದ ಸಮರ್ಥನೆಗೆ ಯತ್ನಿಸುತ್ತಾರೆ. ಮೊತ್ತಮೊದಲು ಈ ಅಭಿಪ್ರಾಯ ವೆಬರ್‍ನಿಂದ ವ್ಯಕ್ತಪಟ್ಟಿತು. ಗ್ರೀಕ್ ರುದ್ರನಾಟಕದ ಸ್ವರೂಪಕ್ಕೂ ಸಂಸ್ಕøತ ನಾಟಕದ ಸ್ವರೂಪಕ್ಕೂ ಇರುವ ಮೂಲಭೇದಗಳನ್ನೆಲ್ಲ ಎತ್ತಿ ತೋರಿಸಿ ಪಿಷೆಲ್ ಈ ವಾದವನ್ನು ಖಂಡಿಸಿದ. ಆದರೆ ವಿಂಡಿಷ್ ಮತ್ತೆ ಇದನ್ನು ಪ್ರಕಾರಾಂತರ ದಿಂದ ಎತ್ತಿ ಹಿಡಿದ. ಗ್ರೀಕ್ ರುದ್ರನಾಟಕಕ್ಕಿಂತ, ವಿನೋದನಾಟಕಗಳ ಪರಂಪರೆಯ ಪ್ರಭಾವವೇ ಭಾರತೀಯ ನಾಟಕದ ಉದಯಕ್ಕೆ ಕಾರಣವೆಂದು ಸೋದಾಹರಣ ಪ್ರತಿಪಾದಿಸಿದ. ಮೃಚ್ಛಕಟಿಕ, ರತ್ನಾವಳೀ, ಮುಂತಾದವುಗಳ ಕಥಾಸಾಮ್ಯ ಕೆಲವೊಂದು ಗ್ರೀಕ್ ನಾಟಕಗಳೊಡನೆ ಅಷ್ಟಷ್ಟು ಇದ್ದ ಮಾತ್ರಕ್ಕೆ ಪ್ರಭಾವ ಎನ್ನುವುದು ಸರಿಯಲ್ಲ. ಶಾಕುಂತಲದಲ್ಲಿ ಯವನಿಯರ ನಿರ್ದೇಶವಿರುವುದು ಭಾರತ-ಗ್ರೀಸ್‍ಗಳ ಪರಸ್ಪರ ಪರಿಚಯ ತೋರಿಸಬಲ್ಲುದೇ ಹೊರತು ಹೆಚ್ಚೇನೂ ಅಲ್ಲ. ಪರದೆಗೆ ಸಂಸ್ಕøತದಲ್ಲಿ ಯವನಿಕಾ ಎನ್ನುವುದು ಗ್ರೀಕ್ ಪ್ರಭಾವದ ಫಲ ಎನ್ನುವಂತಿಲ್ಲ. ಏಕೆಂದರೆ ಪ್ರಾಚೀನ ನಾಟಕ ಹಾಗೂ ಲಕ್ಷಣಗ್ರಂಥಗ ಳಲ್ಲಿ ಈ ಶಬ್ದವೇ ಇಲ್ಲ. ಇದು ಜವನಿಕಾ ಶಬ್ದದ ಪರ್ಯಾಯ. ಸಂಸ್ಕøತ ನಾಟ್ಯರಂಗದಲ್ಲಿ ಉಪಯೋಗಿಸುತ್ತಿದ್ದ ಪರದೆ ಅರಿವೆಯೂ ಯವನ ದೇಶದಲ್ಲಿ ತಯಾರಾಗುತ್ತಿದ್ದ ವಸ್ತುವಲ್ಲ. ಗ್ರೀಕ್ ನಾಟಕಗಳಲ್ಲಿ ಯವನಿಕೆಯಿಲ್ಲ. ಇನ್ನು ಈ ಶಬ್ದದಿಂದ ಗ್ರೀಕ್ ಪ್ರಭಾವ ಸಿದ್ಧವಾಗುವುದು ಹೇಗೆ? ಗದ್ಯ-ಪದ್ಯಗಳ ಬೆರಕೆ, ದೇವ-ಮಾನವ ಪಾತ್ರಗಳ ಮಿಶ್ರಣ, ಅಂಕ-ದೃಶ್ಯಗಳ ವಿಭಾಗ, ಸಾಂಪ್ರದಾಯಿಕ ನಾಯಕ-ನಾಯಿಕೆಯರು ಮುಂತಾದವುಗಳ ಸಾಮ್ಯ ಪ್ರಭಾವದಿಂದಲೇ ಆಗಿರಬೇಕಾಗಿಲ್ಲ. ಆದರೆ ಮೃಚ್ಛಕಟಿಕ ಎಂಬ ಹೆಸರಿಗೆ ಸಂವಾದಿಯಾಗಿ ಗ್ರೀಕ್ ಕಾಮೆಡಿ ಸಿಸ್ಟೆಲ್ಲೇರಿಯಾ (ಕಿರುಪೆಟ್ಟಿಗೆ) ಎಂಬ ನಾಟಕವಿರುವ ಅಂಶ ಕುತೂಹಲಕಾರಿಯಾಗಿದೆ; ಇದು ಕೇವಲ ಕಾಕತಾಲೀಯವಿರ ಬಹುದು.

	ಗ್ರೀಕ್ ನಾಟಕಗಳಿಗೂ ಸಂಸ್ಕøತ ನಾಟಕಗಳಿಗೂ ಇರುವ ಮುಖ್ಯ ವ್ಯತ್ಯಾಸಗಳು ಹೀಗಿವೆ: 

	1. ಶೃಂಗಾರರಸಮಯ ಸಂಸ್ಕøತ ನಾಟಕಗಳು ಗ್ರೀಕ್ ನಾಟಕಗಳಿ ಗಿಂತಲೂ ಹೆಚ್ಚಾಗಿ ಎಲಿಜಬೆತ್ ಕಾಲದ ಇಂಗ್ಲಿಷ್ ನಾಟಕಗಳನ್ನು ಹೋಲುತ್ತವೆ. 2. ಗ್ರೀಕ್ ನಾಟಕಗಳಲ್ಲಿ ಅರಿಸ್ಟಾಟಲ್ ಹೇಳುವ ಐಕ್ಯತ್ರಯಗಳಿಗೆ (ಕಾಲ, ಸ್ಥಳ, ಕಾರ್ಯ) ವಿಶೇಷ ಪುರಸ್ಕಾರವಿದೆ. ಆದರೆ ಸಂಸ್ಕøತ ನಾಟಕಗಳಲ್ಲಿ ಕಾಲೈಕ್ಯ, ಸ್ಥಳೈಕ್ಯಗಳ ನಿಯಮವೇ ಇಲ್ಲ. ಇರುವುದೆಲ್ಲ ರಸೈಕ್ಯದ ನಿಯಮ ಮಾತ್ರ. 3. ಸಂಸ್ಕøತ ನಾಟಕಗಳ ಪ್ರಮುಖ ಅಂಗವಾದ ಪ್ರಸ್ತಾವನೆ ಗ್ರೀಕ್ ನಾಟಕಗಳಲ್ಲಿಲ್ಲ. 4. ನಾಟಕೀಯ ಘಟನೆಗಳ ಪ್ರದರ್ಶನಕ್ಕಿಂತಲೂ ಕಾವ್ಯಮಯ ವರ್ಣನೆಗೇ ಭಾರತೀಯ ನಾಟಕಗಳಲ್ಲಿ ಮಹತ್ತ್ವ; ಸಾಮಾನ್ಯ ಜನರಿಗೆ ಅರ್ಥವೇ ಆಗದ ವರ್ಣನಾಭಾಗಗಳಿಗೂ ಇಲ್ಲಿ ಎಡೆಯುಂಟು; ಗ್ರೀಕ್ ನಾಟಕಗಳಲ್ಲಿಲ್ಲ. 5. ಸಂಸ್ಕøತ ನಾಟಕಗಳು ಸುಸಂಸ್ಕøತರಾದವರನ್ನು ಮಾತ್ರ ಕುರಿತವು; ಗ್ರೀಕ್ ನಾಟಕಗಳ ಉದ್ದೇಶ ಸಾಮಾನ್ಯರ ರಂಜನೆ. 6. ಅತಿಮಾನುಷ ಘಟನೆಗಳಿಗೆ ಇಲ್ಲಿ ಬಹಿಷ್ಕಾರವಿಲ್ಲ. 7. ಸಂಸ್ಕøತ ನಾಟಕ ಅವಸ್ಥಾನುಕೃತಿ; ಗ್ರೀಕ್ ನಾಟಕ ಕಾರ್ಯಾನುಕೃತಿ. 8. ಇಲ್ಲಿ ನಾಟ್ಯಕ್ಕೆ ಪ್ರಾಶಸ್ತ್ಯ; ಅಲ್ಲಿಲ್ಲ. ಇಲ್ಲಿ ಸಾಮೂಹಿಕ ಗಾನವಿಲ್ಲ; ಅಲ್ಲಿದೆ. 9. ಸಂಸ್ಕøತ ನಾಟಕದ ಮುಖ್ಯ ಗುರಿ ಪುರುಷಾರ್ಥಗಳ ಸಂಪ್ರಾಪ್ತಿ; ಆದ್ದರಿಂದ ವಿಷಾದಾಂತಕ್ಕೆ ಅವಕಾಶವೇ ಇಲ್ಲ. ಈ ವ್ಯತ್ಯಾಸಗಳನ್ನು ಗಮನಿಸಿದರೆ ಸಂಸ್ಕøತ ನಾಟಕದ ಆವಿರ್ಭಾವಕ್ಕೆ ಗ್ರೀಕ್ ಪ್ರಭಾವವೇ ಕಾರಣವೆಂಬ ವಾದ ಸಪ್ರಮಾಣವೆನಿಸುವುದಿಲ್ಲ.

	ಅತ್ಯಂತ ಪ್ರಾಚೀನ ಸಂಸ್ಕøತ ಶಾಸನಗಳನ್ನು (ಸು. 150) ಬರೆಸಿದ ಶಕರಾಜರು-ಮಹಾಕ್ಷತ್ರಪರು ತಮ್ಮ ಶಾಸನಗಳಲ್ಲಿ ಸುಗೃಹೀತನಾಮಾ, ಸ್ವಾಮಿನ್ ಮುಂತಾದ ನಾಟಕೀಯ ಶಬ್ದಗಳನ್ನು ವ್ಯವಹರಿಸಿರುವುದರಿಂದ ಇವರ ಕಾಲದಲ್ಲಿಯೇ ಸಂಸ್ಕøತ ನಾಟಕ ಉತ್ಪನ್ನವಾಗಿರಬೇಕೆಂಬುದು ಸಿಲ್ವೇನ್ ಲೇವಿ ಅವರ ವಾದ. ಮೃಚ್ಛಕಟಿಕದಲ್ಲಿ ಬರುವ ಶಕಾರನ ಪಾತ್ರವನ್ನು ಇದಕ್ಕೆ ಉಪಷ್ಟಂಭಕವಾಗಿ ಅವರು ಹೇಳುತ್ತಾರೆ. ಮೊದಲು ನಾಟಕಗಳು ಜನಪ್ರಿಯವಾದ ಪ್ರಾಕೃತಭಾಷೆಯಲ್ಲಿ ಮಾತ್ರ ಇರುತ್ತಿದ್ದು ವೆಂದೂ ಕಡೆಗೆ ಸಂಸ್ಕøತಕ್ಕೂ ಪ್ರವೇಶ ದೊರೆಯಿತೆಂದೂ ಇವರ ಅಭಿಪ್ರಾಯ. ಆದರೆ ಈ ವಾದ ಕೂಡ ಸರ್ವಸಮ್ಮತಿ ಪಡೆದಿಲ್ಲ. ಆದಿಕಾಲದಿಂದಲೂ ಸಂಸ್ಕøತಕ್ಕೆ ನಾಟಕದಲ್ಲಿ ಪ್ರವೇಶವಿದ್ದುದರಲ್ಲಿ ಸಂದೇಹವಿಲ್ಲ. ದೂತವಾಕ್ಯ ಮುಂತಾದ ನಾಟಕಗಳು ಕೇವಲ ಸಂಸ್ಕøತದಲ್ಲಿಯೇ ಇವೆ.

	ಇತ್ತೀಚಿನ ಸಂಶೋಧನೆಗಳು ವೈದಿಕ ಆರ್ಯಸಂಸ್ಕøತಿಗಿಂತ ಪೂರ್ವ ದಲ್ಲಿಯೇ ಪರಿಪುಷ್ಟವಾದ ದ್ರಾವಿಡ-ಸಂಸ್ಕøತಿಯಿದ್ದುದನ್ನು ಹರಪ್ಪ-ಮೊಹೆಂಜೊದಾರೊ ಮುಂತಾದ ಅವಶೇಷಗಳ ಆಧಾರದಿಂದ ಸಿದ್ಧ ಮಾಡಿವೆ. ದಕ್ಷಿಣದ ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಹೇರಳವಾಗಿ ಬರುವ ನಾಟಕ ವಿಷಯದ ಉಲ್ಲೇಖಗಳನ್ನೂ ಈ ಸಂಸ್ಕøತಿ ಹರಡಿದ ದ್ವೀಪಾಂತರಗಳಲ್ಲಿ (ಜಾವ, ಬಾಲಿ ಇತ್ಯಾದಿ) ಇಂದಿನತನಕವೂ ನಾಟ್ಯಪರಂಪರೆ ಉಳಿದು ಬಂದಿರುವುದನ್ನೂ ನಾಟ್ಯಶಾಸ್ತ್ರದಲ್ಲಿಯೇ ತಾಂಡವಕ್ಕೆ ಅಧಿದೇವನಾದ ನಟರಾಜ ಶಿವನ ಉಲ್ಲೇಖವನ್ನೂ ರಸತತ್ತ್ವದ ಬಗೆಗೆ ನಂದಿಕೇಶ್ವರನೇ ಪ್ರಥಮಾಚಾರ್ಯನೆಂಬ ಪರಂಪರೆಯನ್ನೂ ಶಿವಾರ್ಚನೆಯಲ್ಲಿ ನಾಟ್ಯಸೇವೆಗಿರುವ ಮಹತ್ತ್ವವನ್ನೂ ಅನುಲಕ್ಷಿಸಿ ಸಂಸ್ಕøತ ನಾಟಕದ ಆದ್ಯ ರಚನೆಗಳಿಗೆ ಪ್ರೇರಕವಾಗಿ ಆರ್ಯ ದ್ರಾವಿಡ ಸಂಸ್ಕøತಿಗಳೆರಡರ ಸಮ್ಮಿಶ್ರಣವೇ ಕಾರಣವೆಂದು ಇತ್ತೀಚೆಗೆ ಈ ವಿಷಯದ ಮೇಲೆ ಪ್ರೌಢಗ್ರಂಥ ಬರೆದಿರುವ ಶೇಖರ್ ಅವರು ಅಭಿಪ್ರಾಯಪಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರೆಗಳಲ್ಲಿ ನಾಟಕಗಳನ್ನು ಆಡುತ್ತಿದ್ದ ರೆಂದು ತೋರುತ್ತದೆ. ನದೀ ಮೂಲದಂತೆ ಸಂಸ್ಕøತ ನಾಟಕವಾಹಿನಿಯ ಮೂಲವಾದರೂ ಸ್ಪಷ್ಟಾಸ್ಪಷ್ಟವಾಗಿದ್ದರೂ ಬರಬರುತ್ತ, ಅಶ್ವಘೋಷ ಭಾಸರ ವೇಳೆಗೆ ಪಾತ್ರವಿಸ್ತಾರ ಪಡೆದು, ಪ್ರಪಂಚದ ಮತ್ತಾವ ನಾಟಕ ಪರಂಪರೆಯಲ್ಲಿಯೂ ಕಾಣಸಿಗದಷ್ಟು ಭೇದಪ್ರಭೇದಗಳನ್ನು (ರೂಪಕಗಳು 10; ಉಪರೂಪಕಗಳು ಇನ್ನೂ ಹೆಚ್ಚು) ಪಡೆದು ಸಮೃದ್ಧವಾಯಿತು ಎನ್ನಬಹುದು. ಆದರ್ಶವಾದಕ್ಕೆ ಪ್ರಾಧಾನ್ಯವಿದ್ದರೂ ಭಾಷೆಯ ವಿಷಯದಲ್ಲಿ ವಾಸ್ತವಿಕತೆಗೆ ಮಹತ್ತ್ವ ಉಳಿಯುವಂತೆ ಪ್ರಾಕೃತಗಳಿಗೆ ಎಡೆಯಿತ್ತುದು ಸಂಸ್ಕøತ ನಾಟಕದ ವೈಶಿಷ್ಟ್ಯ ಎನ್ನಬಹುದು.      			(ಕೆ.ಕೆ.)

	ಕಾವ್ಯಮಿಮಾಂಸೆ : ಕಾವ್ಯಕಲೆಗೆ ಕಳೆಕೊಡುವ ಶಾಸ್ತ್ರ. ಗದ್ಯ ಪದ್ಯ ಅಥವಾ ಎರಡೂ ಬಗೆಗಳಲ್ಲಿ ಕಾವ್ಯ ಇರಬಹುದು. ಪ್ರಾಚೀನದಲ್ಲಿ ಈ ಅಲಂಕಾರ ಶಾಸ್ತ್ರ ಪ್ರಧಾನವಾಗಿ ನಾಟ್ಯ, ನೃತ್ಯ ಇತ್ಯಾದಿ ರಂಗಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವನ್ನಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿತ್ತು. ಕಾಲಕ್ರಮೇಣ ಅದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿದೆ.  ಇದರ ಉಗಮ ಯಾವಾಗ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಸಾಧ್ಯವಿಲ್ಲ. ಸಾಹಿತ್ಯದಲ್ಲಿ ಎಂದಿನಿಂದ ಸೌಂದರ್ಯೋಪಾಸನೆ ಪ್ರಾರಂಭವಾಯಿತೋ ಅಂದಿನಿಂದ ಪಂಡಿತರು, ವಿಮರ್ಶಕರು ತಮ್ಮ ಸಾಹಿತ್ಯಕ್ಕೆ ಸೌಂದರ್ಯವನ್ನರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು, ಈ ಮನೋರಂಜಕಶಾಸ್ತ್ರವನ್ನು ಮನೋ ಬುದ್ಧ್ಯಾತ್ಮ ಸಂಸ್ಕರಣ ವಿಧಾನವನ್ನು ಹೊಸ ಹೊಸದಾಗಿ ಹುಡುಕಿ ಬಳಸಿಕೊಂಡು ಬಂದರು. ಉಪಮೆ, ಉತ್ಪ್ರೇಕ್ಷೆ, ರೂಪಕ ದೀಪಕಾದಿ ಕಾವ್ಯಾಲಂಕಾರಗಳಲ್ಲಿ ದೃಶ್ಯ ಹಾಗೂ ಶ್ರವ್ಯಕಾವ್ಯ ಹಾಗೂ ಕಲೆಗಳನ್ನು ಊರ್ಜಿತಪಡಿಸಲು ಆಯಾಕಾಲದ ಸೌಂದರ್ಯಕಲೋಪಾಸಕ, ಸಂಪ್ರದಾಯಗಳ ಸಂಘಟನೆಯೇ ಅಲಂಕಾರಶಾಸ್ತ್ರವೆನ್ನಬಹುದು. ನಾಗರಿಕ ಸಂಪ್ರದಾಯಗಳು ಮಾತ್ರ ಈಗ ಗ್ರಂಥಸ್ಥವಾಗಿವೆ. ಆದ್ದರಿಂದ ಜನ ಸಾಮಾನ್ಯರಲ್ಲಿ ರೂಢಿಯಲ್ಲಿದ್ದು ಸಾಂಸ್ಕøತಿಕ ಮತ್ತು ಧಾರ್ಮಿಕ ವಸ್ತು ವಿನ್ಯಾಸದಿಂದ ಮನೋರಂಜನೆ ಮತ್ತು ಸಮಾಜವಿಕಾಸಕ್ಕಾಗಿ ಮೀಸಲಾಗಿದ್ದ ಸೌಂದರ್ಯೋಪಾಸಕ ಸಂವಿಧಾನವೇ ಅಲಂಕಾರ ಶಾಸ್ತ್ರವಾಗಿದೆ. ಕಾವ್ಯದಲ್ಲಿ ಇಂದು ಅಲಂಕಾರವೆಂದರೆ ಕಾವ್ಯತತ್ತ್ವವಿಮರ್ಶೆ ಅಥವಾ ಕಾವ್ಯತತ್ತ್ವ ಮೀಮಾಂಸೆಯಾಗಿದೆ. ಆದ್ದರಿಂದ ಇಂದು ಅಲಂಕಾರ ಶಾಸ್ತ್ರವೆಂದರೆ ಬಹುಮಟ್ಟಿಗೆ ಕಾವ್ಯಮೀಮಾಂಸೆ. ನಾಟ್ಯಶಾಸ್ತ್ರವೇ ಬಹುಕಾಲದಿಂದ ಅಲಂಕಾರ ಶಾಸ್ತ್ರವೆನಿಸಿಕೊಂಡಿದ್ದು ಈಗ ಅಲಂಕಾರವೆಂದರೆ ದೃಶ್ಯ, ಶ್ರವ್ಯ ಕಲೆಗಳ ಮಧುರ ಸಂಗಮವಾದ ಕಾವ್ಯ ಹಾಗೂ ಅದರ ವಿಮರ್ಶೆಯೇ ಆಗಿದೆ.

	ಕ್ರಿ.ಪೂ. 5ನೆಯ ಶತಮಾನದ ವೇಳೆಗೆ ಪಾಣಿನಿಯು ನಟರ ವಿಷಯ ಪ್ರಸ್ತಾಪಿಸುತ್ತಾನೆ. ಕ್ರಿ.ಪೂ. 6ನೆಯ ಶತಮಾನದಲ್ಲಿ ಯಾಸ್ಕ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಕಾಳಿದಾಸನು ಸರ್ವಾಂಗ ಸುಂದರ ನಾಟ್ಯಶಾಸ್ತ್ರವನ್ನು ತಿಳಿಸುತ್ತಾನೆ. ವೇದಗಳ ಕಾಲದಲ್ಲಿ ಉಪಮಾ ರೂಪಕಾದಿಗಳ ಪ್ರಯೋಗಪ್ರಸ್ತಾಪವಿದೆ. ಋಗ್ವೇದದಲ್ಲಿ ಕಂಡುಬರುವ ಯಮ ಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಾದಂತಿದೆ. ಆದ್ದರಿಂದ ಪುರಾತನ ರಾಜ ಮಹಾರಾಜರು ಈ ನಾಟ್ಯಕಲೆಗೆ ಪ್ರೋತ್ಸಾಹಿಸುವುದಕ್ಕೆ ಮುಚೆಯೇ ಈ ಕಲೆ ಜನಜೀವನದಲ್ಲಿ ಬೆಳೆದು ಬಂದಿದ್ದಿತು. ಇದಕ್ಕೆ ಐತಿಹಾಸಿಕ ನಿದರ್ಶನವಿಲ್ಲದ ಮಾತ್ರಕ್ಕೆ ಇದನ್ನು ಪುರಾತನವಲ್ಲವೆಂದು ಅಲ್ಲಗಳೆಯಲಾಗದು. ಹಿಂದಿನಿಂದ ಬೆಳೆದು ಬಂದ ಈ ಕಲೆಗೆ ಪೌರಾಣಿಕ ಹಿನ್ನಲೆ ಕೊಡಲು ವಿಮರ್ಶಕರು ಶಿವ, ಬ್ರಹ್ಮ, ನಂದಿಕೇಶ್ವರ, ಕಶ್ಯಪ, ಭರತ ಇತ್ಯಾದಿ ಪುರಾಣ ಪುರುಷ ಪ್ರಣೀತವಾದ ನಾಟಕ, ಈ ಅಲಂಕಾರಶಾಸ್ತ್ರಗಳು ಅಪೌರುಷೇಯ ಎನ್ನುತ್ತಾರೆ.

	ಅಲಂಕಾರಶಾಸ್ತ್ರದಲ್ಲಿ ಮೊದಲು ದೃಶ್ಯಕಾವ್ಯದ ಬಗ್ಗೆ ಹೆಚ್ಚು ಆಸಕ್ತಿ ಕಂಡುಬಂದರೂ ಶ್ರವ್ಯಕಾವ್ಯಗಳ ವಿಷಯವೇ ಇಲ್ಲವೆನ್ನುವಂತಿಲ್ಲ. ಕಾವ್ಯ ಜೀವಾಳವೇನು ಅಥವಾ ಸರ್ವಸ್ವವೇನು ಎಂಬ ಬಗ್ಗೆ ಉತ್ತರ ಹಿಂದಿನಿಂದ ಇಂದಿನವರೆಗೆ ಬೇರೆ ಬೇರೆಯಾಗಿದೆ. ಅಲಂಕಾರವೇ ಕಾವ್ಯಸರ್ವಸ್ವ ಎಂಬ ಭಾಮಹಾದಿಗಳು ಇದು ಆರು ರೀತಿಯೆಂದು, ವಾಮನಾದಿಗಳು ಅದರ ಮಾರ್ಗವೇ (ಗುಣವೇ) ಅದರ ಜೀವಾಳವೆಂದು, ದಂಡಿ ಮೊದಲಾದವರು ಆನಂದವೇ ಕಾವ್ಯದ ಮುಖ್ಯಗುರಿ ಅದಕ್ಕೆ ಶಬ್ದ ಅಥವಾ ಅರ್ಥದ ಧರ್ಮಗಳಾದ ಅಲಂಕಾರ, ಗುಣ, ರೀತಿ ಇವು ಅವಿನಾಭೂತ ಅಥವಾ ಅನಿವಾರ್ಯ. ಕಾವ್ಯಸೌಂದರ್ಯ ಕೇವಲ ಧ್ವನಿಯನ್ನವಲಂಬಿಸಿದೆ. ಅದೇ ಕಾವ್ಯದ ಆತ್ಮ, ಧ್ವನಿಯೆಂದು ಆನಂದವರ್ಧನಾದಿಗಳು ಹೇಳುತ್ತಾರೆ. ಹೀಗೆ ಕಾವ್ಯಶಾಸ್ತ್ರದಲ್ಲಿ ಅಥವಾ ಅಲಂಕಾರಶಾಸ್ತ್ರದಲ್ಲಿ ಧ್ವನಿಯೇ ಸರ್ವಸ್ವ. ಕಾವ್ಯ ಸಾಮ್ರಾಜ್ಯ ಧ್ವನಿ ಸಾಮ್ರಾಜ್ಯ ಹೀಗೆ ಕಾವ್ಯ ವಿಚಾರಧಾರೆ ನಾಟ್ಯಪ್ರಧಾನವಾಗಿ ಹೊರಟು ಈಗ ಧ್ವನಿಪ್ರಧಾನವಾಗಿ ನಿಂತಿದೆ.

	ಈ ಅಲಂಕಾರಶಾಸ್ತ್ರ ಅನೇಕ ಮಹಾವಿಮರ್ಶಕ ವಿಭೂತಿಗಳಿಂದ ಕಟ್ಟಲ್ಪಟ್ಟ ಕಲಾ ವಿಮರ್ಶಾತ್ಮಕ ಸೌಧ. ದೈವಾಂಶೀಕರು, ಮುನಿಗಳು, ಮಾನವರು ಎಲ್ಲರ ಹೆಸರೂ ಕಂಡುಬರುತ್ತದೆ. ಉಮಾಮಹೇಶ್ವರರು, ನಂದೀಶ್ವರ, ಬ್ರಹ್ಮ ಇವರು ಈ ಕಲೆಯನ್ನು ಪ್ರಪಂಚಹಿತಕ್ಕಾಗಿ ತಾವೇ ಸ್ವತಃ ಕಂಡು ಇತರರಿಗೆ ಉಪದೇಶಿಸಿದರೆಂಬ ಸಂಪ್ರದಾಯವನ್ನು ಕಾಳಿದಾಸಾದಿಗಳು ಮಾನಿಸುತ್ತಾರೆ. ರಾಜಶೇಖರ ಕವಿ ತಮ್ಮ ಕಾವ್ಯಮೀಮಾಂಸೆಯಲ್ಲಿ 18 ಅಧಿಕರಣವುಳ್ಳ (ವಿಭಾಗ) ಈ ನಾಟ್ಯವನ್ನು 18 ಮುನಿಗಳು ಕಂಡು ಅನುಗ್ರಹಿಸಿದರೆನ್ನುತ್ತಾನೆ. ನಂದೀಕೇಶ್ವರನು ರಸಾರ್ಣವವೆಂಬ ಗ್ರಂಥವನ್ನು ಬರೆದನೆಂದು ಅಭಿನವಗುಪ್ತ ತಿಳಿಸುತ್ತಾನೆ. ಅಭಿನಯ ದರ್ಪಣವೆಂಬ ಗ್ರಂಥ ನಂದೀಶ್ವರ ಪ್ರಣೀತವೆಂದು ಹೇಳುತ್ತಾರೆ. ಈತನ ಗ್ರಂಥದಿಂದಲೇ ಸುಮತಿ ಎಂಬವನು ಭರತಾರ್ಣವವೆಂಬ ಗ್ರಂಥ ತಯಾರಿಸಿದನಂತೆ. ಈ ಭಾರತೀಯ ನಾಟ್ಯಶಾಸ್ತ್ರದ ಪ್ರಭಾವ ಸಿಂಹಳ, ಇಂಡೋನೇಷ್ಯ, ಜಾವ ಇತ್ಯಾದಿ ದೇಶಗಳಿಗೂ ವ್ಯಾಪಿಸಿದೆ. ಈ ನಾಟ್ಯ ಕಲೆಗೆ ಒಂದು ಪೌರಾಣಿಕ ಹಿನ್ನೆಲೆಯಾಗಿ ದೃಶ್ಯ ಶ್ರವ್ಯ ಕಾವ್ಯ ಕಲಾ ಸಂಪ್ರದಾಯಗಳ ಸಂಗ್ರಹಾಲಯದಂತಿರುವ ಅಗ್ನಿಪುರಾಣ ವ್ಯಾಸ ಪ್ರಣೀತವೆನ್ನುತ್ತಾರೆ. ಭರತನ ನಾಟ್ಯಶಾಸ್ತ್ರವೂ ಈ ಸಂಪ್ರದಾಯಗಳ ಸಂಗ್ರಹ ಅಥವಾ ಸಂಕಲನ ಗ್ರಂಥವಾದರೂ ಅದು ಭಾರತೀಯ ಸೌಂದರ್ಯಶಾಸ್ತ್ರ ಹಾಗೂ ಕಾವ್ಯ ಮೀಮಾಂಸೆಗಳಿಗೆ ಪ್ರಪ್ರಥಮ ಆಧಾರಗ್ರಂಥವೆನ್ನಬಹುದು. ನಾಟ್ಯಶಾಸ್ತ್ರ ಕರ್ತೃವಾದ ಭರತ (1ನೆಯ ಶತಮಾನ) ಒಬ್ಬ ಮುನಿ. ಬ್ರಹ್ಮನಿಂದ ಈ ನಾಟ್ಯವೇದವನ್ನು ಪಡೆದು ಅನುಗ್ರಹಿಸಿದನೆಂದು ಊಹಿಸುವವರೂ ಇದ್ದಾರೆ. ಅದೇನೇ ಇರಲಿ ಭರತನ ನಾಟ್ಯಶಾಸ್ತ್ರ ಈ ದಿಕ್ಕಿನಲ್ಲಿ ಮೊಟ್ಟಮೊದಲನೆಯ ಆಧಾರಗ್ರಂಥ. ಅಭಿನವಗುಪ್ತ ಇದಕ್ಕೆ ಅಭಿನವ ಭಾರತೀ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಈ ಗ್ರಂಥದ ಮಧ್ಯೆ ಮಧ್ಯೆ ಹೊಸ ಶ್ಲೋಕಗಳಿದ್ದು ಎರಡು ರೀತಿ ಇದೆ.

	ಭರತನ ನಾಟ್ಯಶಾಸ್ತ್ರ ಭಾರತೀಯ ಸೌಂದರ್ಯಶಾಸ್ತ್ರದ ವಿಶ್ವಕೋಶ ದಂತಿದೆ. ನಾಟ್ಯಕ್ಕೆ ಅಲ್ಲಿ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ ಈ ಎಂಟು ರಸಗಳು, ಅವುಗಳ ವಿಭಾವ (ರಸಕ್ಕೆ ಆಧಾರ ಅಥವಾ ಅಧಿಷ್ಠಾನ) ಅನುಭಾವಗಳು (ಬಾಹ್ಯ ಪ್ರತಿಕ್ರಿಯೆ), ವ್ಯಭಿಚಾರಿಭಾವ (ಮಾನಸಿಕ ಪರಿಣಾಮ), ನಾಟ್ಯಾಂಗಕ್ಕೆ ಬೇರೆಯಾಗಿ ಅಲಂಕಾರಾಂಗ ಮತ್ತು ಕಾವ್ಯ ವಿಮರ್ಶೆಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಅಗ್ನಿಪುರಾಣದಲ್ಲಿ ಇಲ್ಲಿಯ ಅಂಶಗಳೇ ಪುನರಾವೃತ್ತವಾಗಿವೆಯೆಂದು ವಿಮರ್ಶಕರ ಅಭಿಪ್ರಾಯ. ನಾಟ್ಯಶಾಸ್ತ್ರದಲ್ಲಿ 36 ಅಧ್ಯಾಯಗಳು, 6000 ಅನುಷ್ಟುಭ್ ಶ್ಲೋಕಗಳು ಇವೆ. ಕೆಲವೆಡೆ ಗದ್ಯವೂ ಉಂಟು. ಇದು ಇತ್ತೀಚಿನ ಪ್ರಕ್ಷಿಪ್ತವೆಂದು ಕೆಲವರ ಅಭಿಪ್ರಾಯ. 

	ಋಗ್ವೇದದಿಂದ ಮಂತ್ರಭಾಗವನ್ನು, ಯಜುರ್ವೇದದಿಂದ ಅಭಿನಯ ವನ್ನು, ಸಾಮವೇದದಿಂದ ಗಾನವನ್ನು, ಅಥರ್ವವೇದದಿಂದ ರಸವನ್ನು ಆರಿಸಿಕೊಂಡು ಈ ನಾಟ್ಯಶಾಸ್ತ್ರವೆಂಬ ಪಂಚಮ ವೇದವನ್ನು ರಚಿಸಿದ ಬ್ರಹ್ಮ ಭರತನಿಗೆ ಉಪದೇಶಿಸಿದ. ಆತ ತನ್ನ 100 ಮಂದಿ ಮಕ್ಕಳಿಗೂ ಇದನ್ನು ಕಲಿಸಿದ. ಪೂರ್ವರಂಗ (ನಾಟ್ಯರಂಗ ಸಜ್ಜಿಕೆ, ನಾಟ್ಯ ಮಂಡನ) ನಾಂದಿ, ಅಂಗಹಾರ (ಅವಯವ ಚಲನೆ), ರೇಚಕ (ಹಾವಭಾವ), ತಾಂಡನ, ರಸ, ಭಾವ, ಅಭಿನಯ, ಧರ್ಮಿ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸ್ವರ, ಆತೋದ್ಯ (ವಾದ್ಯ), ಗಾನ, ದಶರೂಪಕ, ಛಂದಸ್ಸು, ಅಲಂಕಾರಗಳು, ಸಂಸ್ಕøತ, ಪ್ರಾಕೃತ (ಶೌರಸೇನೆ) ಮಾಗಧೀ, ಅವಂತಿಜಾ, ತ್ರಾಚ್ಯಾ, ಅರ್ಧಮಾಗಧೀ, ಬಾಹ್ಲೀಕಾ (ದಾಕ್ಷಿಣಾತ್ಯ), ದೇಶೀ (ಶಾಂಬರ, ಅಭೀರ, ಬಂಡಾಲ, ಶಕಾರ, ದ್ರಾವಿಡ ಪಡ್ರ (ಒರಿಸ್ಸ), ಸಂಶೋಧನೆ, ಸ್ವರವಿಶೇಷ (ಉದಾತ್ತ, ಅನುದಾತ್ತ ಸ್ವರಿತ, ಕಂಪಿತ) ಇವು ದಶರೂಪಕದ ಪ್ರಭೇದಗಳು. ಸ್ತ್ರೀಪುರುಷ ಭೇದ, ಸ್ತ್ರೀಪುರುಷ ವಶೀಕರಣ ವಿಧಾನ, ಚಿತ್ರಾಭಿನಯ, ಸಾಮಾನ್ಯಾಭಿನಯ, ಸಿದ್ಧಿ (ದೈವೀ, ಮಾನುಷೀ), ವಿದೂಷಕಾದಿ ಪಾತ್ರ ವಿಮರ್ಶೆ, ನಾಯಕ ನಾಯಿಕಾ ಭೇದ, ಕಾಲ ಲಯಭೇದ, ವಾದ್ಯಗಳು ಇತ್ಯಾದಿಗಳು ಪ್ರತಿಪಾದಿತವಾಗಿವೆ.

	ನಾಟಕದ ಮಹಿಮೆಯನ್ನು ಕಂಡುಕೇಳದ ಜನರಿಲ್ಲ. ಈ ಕಲೆಗೆ ಎಂದೆಂದೂ ಪುರಸ್ಕಾರವಿದೆ. ಅದಕ್ಕೆ ಸರ್ವಾಂಗ ಸುಂದರ ಮತ್ತು ಸಮಗ್ರ ರೂಪಕೊಟ್ಟವನೆಂದರೆ ಭರತ. ರಂಗಶಿಲ್ಪ, ನಟರ ಆಯ್ಕೆ ಅವರ ಯೋಗ್ಯತೆಯಂತೆ ಪಾತ್ರಧಾರಣೆ, ಭಕ್ತಿ, ಯುಕ್ತಿ, ಪ್ರಯೋಗ, ಕೌಶಲ, ಸಾಂಸ್ಕøತಿಕ ಮಹಾತ್ಮೆ, ರಾಗ, ತಾಳ, ಅಭಿನಯ, ಇತ್ಯಾದಿ ನಾಟಕಕಲೆಯ ವಿಶ್ವರೂಪವನ್ನೇ ಶಾಸ್ತ್ರೀಕರಿಸುವ ಈ ಭರತನ ನಾಟ್ಯಶಾಸ್ತ್ರ ದಂಥ ಬೇರೆ ಗ್ರಂಥ ಪ್ರಪಂಚ ಸಾಹಿತ್ಯದಲ್ಲಿ ಇಲ್ಲ. ನಟರು ಕುಶೀಲವುಳ್ಳವರು ಎಂಬ ತಪ್ಪು ಕಲ್ಪನೆ ಕಾಲಮಹಿಮೆಯದೇ ಹೊರತು ಕಲೆಯ ಅಂಗವಲ್ಲ. ಭರತನ ಮಕ್ಕಳು ಈ ಕಲೆಯನ್ನು ದುರುಪಯೋಗ ಪಡಿಸಿಕೊಂಡದ್ದರಿಂದ ಕೇವಲ ಶೂದ್ರರೇ ಆಡುವಂತೆ ಶಾಪ ಪಡೆದದ್ದೇ ಈ ಅಭಿಪ್ರಾಯವನ್ನು ಪುಷ್ಟೀಕರಿಸುವುದು. ನಾಟಕ ದೇವತಾರಾಧನೆಗೆ ಮಹಾಸಾಧನವೆಂಬ, ಬಾಹ್ಯ ಪೂಜೆ ತಪಸ್ಸುಗಳಿಗಿಂತ ದೇವತೆಗಳು ಭಕ್ತಿಪ್ರದರ್ಶಕ ನಾಟಕಕ್ಕೆ ಹೆಚ್ಚು ಒಲಿಯುವರೆಂಬ ನಂಬಿಕೆ ಇಂದಿಗೂ ಇದೆ. ಇದನ್ನನುಸರಿಸಿ ಒಂದೊಂದು ವಿಷಯದಲ್ಲೂ ಅನೇಕ ಗ್ರಂಥಗಳು ರಚಿಸಲ್ಪಟ್ಟಿವೆ. ನಾಟ್ಯಕಲೆಯ ಜೊತೆಯಲ್ಲೇ ಸಾಹಿತ್ಯಮೀಮಾಂಸಾ, ಭಾಗವಾದ ರಸ, ಅಲಂಕಾರ, ಕಾವ್ಯ ತತ್ತ್ವಗಳು ಇತ್ಯಾದಿಗಳೂ ಇಲ್ಲಿ ಸೇರಿಕೊಂಡಿವೆ. ಭರತನ ಕಾಲಕ್ಕಿಂತ ಮುಂಚೆ ಭರತಖಂಡದಲ್ಲಿ ದೃಶ್ಯ ಶ್ರವ್ಯ ಕಾವ್ಯ ಕಲಾ ಪ್ರೌಢಿಮೆ ಉದಯಿಸಿತ್ತು. ಅದೆಲ್ಲಾ ಇಲ್ಲಿ ಅಡಗಿದೆ. ಇತ್ತೀಚಿಗೆ ಇದರಿಂದ ತೆಗೆದುಕೊಂಡು ಇತರರು ಆ ಕಲೆಯನ್ನು ವಿಸ್ತರಿಸಿದ್ದಾರೆ. ಭರತನಿಗೆ ದೈವಾಂಶವನ್ನಂಗೀಕರಿಸಿ ಆತನ ಗ್ರಂಥ ಪ್ರಾಮಾಣಿಕತೆಯನ್ನು ಹೆಚ್ಚಿಸಿಲಾಗಿದೆ. ವಸ್ತು, ಶೈಲಿ, ಪ್ರಯೋಜನ, ಸಾಹಿತ್ಯ ವಿಮರ್ಶೆಗಳಿಗೆ ಭರತನ ನಾಟ್ಯಶಾಸ್ತ್ರ ಮಹೋನ್ನತ ಸ್ಥಾನ ಪಡೆದಿದೆ.

	ಅಲಂಕಾರ ಸಂಪ್ರದಾಯ ಅಥವಾ ನಾಟ್ಯದೂರ ಕಾವ್ಯವಿಮರ್ಶೆ ಕ್ರಿ.ಶ. 5ನೆಯ ಶತಮಾನದಿಂದೀಚೆಗೆ ಹೆಚ್ಚು ಬೆಳೆದಿದೆ. ಸುಮಾರು ಒಂದು ಸಾವಿರ ವರ್ಷ ದೃಶ್ಯಕಾವ್ಯಕಲೆಗೆ (ನಾಟಕಗಳಿಗೆ) ಆಸಕ್ತಿ ಇದ್ದಿರಬಹುದು. ಕಾವ್ಯಮೀಮಾಂಸೆ ಈ ಮಧ್ಯೆ ಇರಲೇ ಇಲ್ಲವೆನ್ನುವಂತಿಲ್ಲ. ಆದರೆ 6ನೆಯ ಶತಮಾನದಿಂದೀಚೆಗೆ ಭಾಮಹ, ದಂಡಿ, ಉದ್ಧಟ, ವಾಮನ, ಲೊಲ್ಲಟ, ಆನಂದವರ್ಧನ, ರಾಜಶೇಖರ, ಮಮ್ಮಟ, ಭೋಜ, ವಿಶ್ವನಾಥ, ಜಗನ್ನಾಥ ಮುಂತಾದವರು ಈ ಕಾವ್ಯಮೀಮಾಂಸೆಯನ್ನು ಬೆಳೆಸಿಕೊಂಡು ಬಂದರು. ಈ ವಿಮರ್ಶಕ ಹಾಗೂ ಸಹೃದಯ ಪಂಕ್ತಿಯ ಈ ಒಬ್ಬೊಬ್ಬರು ಒಂದೊಂದು ವೈಶಿಷ್ಟ್ಯವನ್ನು ಪಡೆದಿದ್ದಾರೆ. ಭಾಮಹನಿಗಿಂತ ದಂಡಿ  ಮೊದಲಿಗನೇ ಅಥವಾ  ದಂಡಿಗಿಂತ ಭಾಮಹ ಮೊದಲಿಗನೇ ಎಂಬ ವಾದ ಇದ್ದೇ ಇದೆ. “ವಾಚಾಂ ವಿಚಿತ್ರ ಮಾರ್ಗಾಣಾಂ ನಿಜಬಂಧುಃ ಕ್ರಿಯಾವಿಹಿ” ಎಂದು ಕಾವ್ಯದಲ್ಲಿ ವಿಭಿನ್ನ ವಿಚಿತ್ರಮಾರ್ಗಗಳನ್ನು ಮುಖ್ಯವೆಂದು ಪ್ರತಿಪಾದಿಸಿದ್ದಾನೆ. ಈ ಮಾರ್ಗಗಳು ವೈದರ್ಭೀ ಮತ್ತು ಗೌಡೀ. ಇವುಗಳೇ ಕಾವ್ಯದಲ್ಲಿ ಬಂಧ. ವೃತ್ತಿ ಪ್ರವೃತ್ತಿ ಎಂದು ಬೇರೆಯವರು ಕರೆಯುತ್ತಾರೆ. ವಾಮನನು ಇದನ್ನು “ರೀತಿರಾತ್ಮಾಕಾವ್ಯಸ್ಯ” ಎಂದು ಬಂಧಕ್ಕೆ (ಮಾರ್ಗ) ರೀತಿ ಎಂದು ಹೊಸ ಹೆಸರಿಟ್ಟಿದ್ದಾನೆ. ಆದರೆ ವಾಮನನ ಮುಖ್ಯ ಕಾಣಿಕೆಯೆಂದರೆ ಕಾವ್ಯಕ್ಕೆ ಒಂದು ಆತ್ಮವಿದೆಯೆಂದು ಹೇಳಿರುವುದು. ಅಂದರೆ ಕಾವ್ಯಶರೀರ ಬೇರೆ, ಕಾವ್ಯದ ಆತ್ಮ ಬೇರೆ ಎಂದು ಹೇಳಿದಂತಾಯಿತು. ಈತನ ವರೆಗೆ ಯಾರೂ ಈ ಮಾತನ್ನು ಹೇಳಿರಲಿಲ್ಲ. ಈ `ರೀತಿ ಏನೆಂದರೆ “ವಿಶಿಷ್ಟಪದರಚನೆ” ಇದರ ಗುಣಗಳೇ ಎನ್ನುತ್ತಾನೆ ವಾಮನ. ಈ ಕಾವ್ಯ ಗುಣಗಳನ್ನು ದಂಡಿ ಬಹುವಾಗಿ ವರ್ಣಿಸಿ ಒತ್ತಿ ಹೇಳಿದ್ದಾನೆ. ಈ ಗುಣಗಳು ಪುನಃ ಪ್ರಸಾದ, ಸಮತಾ, ಮಾಧುರ್ಯ, ಕಾಂತಿ, ಉದಾರತಾ, ಸುಕುಮಾರತಾ, ಅರ್ಥವ್ಯಕ್ತಿ, ಪ್ರೌಢಿ-ಈ ಹತ್ತು ಗುಣಗಳೇಕೆ, ಮಾಧುರ್ಯ, ಓಜ, ಪ್ರಸಾದ ಈ ಮೂರೇ ಸಾಕೆಂದು 12ನೆಯ ಶತಕದ ಕಾಶ್ಮೀರಿ ಕವಿ ಮಮ್ಮಟ ಹೇಳುತ್ತಾನೆ. ಭಾಮಹ, ಉದ್ಭಟ ಮತ್ತು  ರುದ್ರಟಾದಿಗಳು ಕಾವ್ಯದಲ್ಲಿ ವಕ್ರೋಕ್ತಿ ಅಂದರೆ ವಿಚಿತ್ರೋಕ್ತಿ, ಅಂದರೆ ಅಲಂಕಾರಿಕವಾಗಿ ಹೇಳುವುದೇ ಕಾವ್ಯದ ಜೀವಾಳವೆನ್ನುತ್ತಾರೆ. ಆದ್ದರಿಂದ ಭಾಮಹನನ್ನು ಅಲಂಕಾರ ಸಂಪ್ರದಾಯದವನೆನ್ನುತ್ತಾರೆ. ಸೈಷಾ ಸರ್ವೈವ ವಕ್ರೋಕ್ತಿರನಯಾರ್ಥೆ ವಿಭಾವ್ಯತೇ ಅಂದರೆ ಸಹಜ ಸುಂದರಿಯಾದರೂ ಅಲಂಕಾರದಿಂದ ಸೌಂದರ್ಯ ಹೆಚ್ಚುವಂತೆ ಕಾವ್ಯದಲ್ಲಿ ಅಲಂಕಾರಗಳೇ ಅನುಪ್ರಾಸಾದಿ ಶಬ್ದಾಲಂಕಾರ ಉಪಮಾದಿ ಅರ್ಥಾಲಂ ಕಾರಗಳು ಕಾವ್ಯಶೋಭೆಗೆ ಕಾರಣವೆನ್ನುವರು ಭಾಮಹೋದ್ಭಟಾದಿಗಳು. ಅಂದರೆ ಕಾವ್ಯದ ಶೈಲಿ, ಕಾವ್ಯದ ಮೈಕಟ್ಟು, ಸುಲಲಿತ ಸುಮಧುರವಾಗಿರ ಬೇಕೆಂದೆಲ್ಲರೂ ಒಪ್ಪುವರು. ಈ ಮಾತನ್ನೇ ಲಾಕ್ಷಣಿಕನಾಗಿ ವಿಮರ್ಶೆ ಮಾಡಿ ಆನಂದವರ್ಧನ (9-10ನೆಯ ಶತಮಾನ) ಶಬ್ದ, ಅರ್ಥಗಳ ಮಧುರ ಸಂಮಿಳನವೇ ಕಾವ್ಯ ಎಂದರೂ ಅವುಗಳ ಸಾಕ್ಷಾದರ್ಥವನ್ನು ಮೀರಿ ಪರೋಕ್ಷವಾದ ಇನ್ನೊಂದು ಸೂಕ್ಷ್ಮ ಶಬ್ದಾರ್ಥವ್ಯಾಪಾರ ಇರುತ್ತದೆ ಅದೇ ಧ್ವನಿ. ಈ ಧ್ವನಿಗೆ ಅವಕಾಶವಿರುವುದೇ ಉತ್ತಮ ಕಾವ್ಯ.  ಧ್ವನಿ ಅಥವಾ ವ್ಯಂಜನಕ್ಕೆ ಅವಕಾಶಮಾಡಿಕೊಡುವವನೇ ಉತ್ತಮ ಕವಿ. ಈ ಧ್ವನಿ ಕಾವ್ಯವಾಸನಾಪರಿಪಕ್ವ ಮತಿಗಳಿಗೆ, ಪ್ರತಿಭಾನ್ವಿತರಿಗೆ ಮೀಸಲು. ಶಬ್ದಾರ್ಥಗಳಿಗೆ ಗುಣ ಅರ್ಥಗಳು ಮುಖ್ಯವಾದಂತೆ ಈ ಧ್ವನಿಯ ವ್ಯಾಪಾರವೂ ಸಹಜ. ಇದು ಮನೋವ್ಯಾಪಾರ. ಅಭ್ಯಾಸ ಪಯತ್ನದಿಂದ ಕರಗತವಾಗುವ ಸಂಸ್ಕøತಿ, ಇದೇ ಕಾವ್ಯಾರ್ಥ ಸರ್ವಸ್ವ ಇತ್ಯಾದಿ ಸಮರ್ಥಿಸಿ ಧ್ವನಿಕಾರನೆಂದು ಪ್ರಸಿದ್ಧನಾಗಿದ್ದಾನೆ.

	ಆಲಂಕಾರಿಕ ಮತಭೇದಗಳು ಉದಯಿಸಿದಂದಿನಿಂದ ಇಲ್ಲಿಯವರಿಗೆ ಸಾಹಿತ್ಯ ಅಥವಾ ರಸಾಸ್ವಾದದಲ್ಲಿ ಏನೊಂದು ಬದಲಾವಣೆಯಿಲ್ಲವಾ ದರೂ ಅದರ ಹಿನ್ನೆಲೆಯನ್ನು ವಿಮರ್ಶಿಸುವಾಗ ಬೇರೆಬೇರೆ ವಿಮರ್ಶಕರು ಬೇರೆ ಬೇರೆ ಅಭಿಪ್ರಾಯ ಪಟ್ಟಿರುವರು. ಈವರೆಗೆ ಗಮನಿಸಿದಂತೆ  6ನೆಯ ಶತಮಾನದವರೆಗೆ ಭರತನ ನಾಟ್ಯಶಾಸ್ತ್ರ, ಅಗ್ನಿಪುರಾಣ ಇತ್ಯಾದಿಗಳಲ್ಲಿ ಕಾವ್ಯಪ್ರಪಂಚದ ರೀತಿ , ಗುಣ, ಅಲಂಕಾರ, ವೃತ್ತಿ,  ಪ್ರವೃತ್ತಿ, ರಸ ಇತ್ಯಾದಿ ಪಾರಿಭಾಷಿಕ ಅಂಶಗಳಿದ್ದರೂ ನಾಟ್ಯ ಪ್ರಪಂಚಕ್ಕೆ ಪಂಡಿತರ ಬಲ ಹೆಚ್ಚು ಆಗಿತ್ತು. ಆದರೆ ಸು. 6ನೆಯ ಶತಮಾನದಿಂದೀಚೆಗೆ ಭಾಮಹ, ದಂಡಿ, ವಾಮನ, ಉದ್ಭಟಾದಿಗಳು, ಆನಂದವರ್ಧನ ಮುಂತಾದವರು ಕಾವ್ಯದ ಶರೀರ, ಆತ್ಮ ಹಾಗೂ ಕಾವ್ಯಾನಂದ ಇವುಗಳ ವಿಮರ್ಶೆಗೆ ಹೊರಟು ಬೇರೆ ಬೇರೆ ಮತಗಳಿಗೆ ಅಂಕುರಾರ್ಪಣ ಮಾಡಿದರು. ಸೌಂದರ್ಯವನ್ನು ಆಸ್ವಾದಿಸುವವರು ಭಿನ್ನರುಚಿಗಳೆಂದು ಇಷ್ಟು  ಮಾತ್ರ ಒಪ್ಪಿದರೆ ಸಾಕು. ಸೌಂದರ್ಯಶಾಸ್ತ್ರದಲ್ಲೂ ಭಿನ್ನರುಚಿ ಸ್ವಾಭಾವಿಕವೆಂದು ಸ್ಪಷ್ಟವಾಗುತ್ತದೆ. ಅರ್ಥಗರ್ಭಿತ ಶಬ್ದ ಪ್ರಪಂಚವೇ ಕಾವ್ಯಪ್ರಪಂಚ. ಶಬ್ದದಲ್ಲಿ ಯಮಕ, ಅನುಪ್ರಾಸಾದಿ ಅಲಂಕಾರಗಳು, ಅರ್ಥದಲ್ಲಿ ಉಪಮಾದ್ಯಲಂಕಾರಗಳು ಮುಖ್ಯ. ಈ ಅಲಂಕಾರಗಳೇ ಕಾವ್ಯಗಳಿಗೆ ಮುಖ್ಯ ಎಂದು ಭಾಮಹ ಹೇಳುತ್ತಾನೆ. ಸರಸ, ಸರಳ ಕಾವ್ಯಬಂಧವೇ ಓದುಗರಿಗೆ ಅಪ್ಯಾಯಮಾನಕರ. ಆ ಬಂಧವೇ ಪ್ರಸಾರ ಅಂದರೆ ಸುಗಮಾರ್ಥವುಳ್ಳ ರೀತಿ ಅಥವಾ ಮಾರ್ಗ ಮುಖ್ಯವೆಂದು ದಂಡಿ ಹೇಳುತ್ತಾನೆ. ಇವೆರಡನ್ನು ಸೇರಿಸಿ ಉತ್ತಮಗುಣವುಳ್ಳ ವಿಶಿಷ್ಟ (ಒಳ್ಳೆ ಶಬ್ದ ಮತ್ತು ಅರ್ಥವುಳ್ಳ)  ಪದರಚನೆಯೇ (ರೀತಿ) ಕಾವ್ಯದ ಆತ್ಮ ಅಥವಾ ಸಾರಸರ್ವಸ್ವವೆಂದು ವಾಮನನ ಮತ. ಕಾವ್ಯದಲ್ಲಿ  ಋಜುಮಾರ್ಗವನ್ನು ಬಿಟ್ಟು ವಕ್ರತೆ (ಭಂಗಿ) ಇರಬೇಕೆಂದು ಕುಂತಕ ಹೇಳುತ್ತಾನೆ. ಆದರೆ ಆನಂದವರ್ಧನ ಕಾವ್ಯದಲ್ಲಿ ದೂರಗಾಮಿಯಾದ ಧ್ವನಿಯೇ ಆಸ್ವಾದನೀಯ. ಇಲ್ಲವಾದರೆ ಅದು ಉತ್ತಮಕಾವ್ಯವಾಗದೆನ್ನು ತ್ತಾನೆ. ಮಧುರ ಧ್ವನಿ ವ್ಯಕ್ತವಾಗಲು ವೀಣೆ , ಮೃದಂಗ ಇತ್ಯಾದಿಗಳು ಹೇಗೆ ಸಾಧಕವೋ ಹಾಗೆ ಕಾವ್ಯದ ಮಾಧುರ್ಯಕ್ಕೆ ಧ್ವನಿಸಾಧಕ.  ಕಾವ್ಯ ಮಾಧುರ್ಯ ಭಾವವಿರಬಹುದು, ಅಲಂಕಾರವಿರಬಹುದು ಅಥವಾ ರಸವಿರಬಹುದು. ಅದನ್ನು ವಾಚಿಸುವುದು ಶಬ್ದ ಹಾಗೂ ಅರ್ಥ. ಆದರೆ ಅದನ್ನು ಸೂಚಿಸುವುದು ಅದಕ್ಕೆ ಸಾಧ್ಯವಿಲ್ಲ. ಎಲ್ಲರೂ ಎಲ್ಲವನ್ನೂ ತಿಳಿದವರಲ್ಲ. ಕೆಲವರೇ ಕಾವ್ಯದ ಹಾಗೂ ಕಲೆಯ ಗೂಡಾರ್ಥವನ್ನಾಸ್ವಾದಿ ಸುವವರು. ವಾಚಕ, ಲಾಕ್ಷಣಿಕ ಹಾಗೂ ತಾತ್ಪರ್ಯ ವೃತ್ತಿ (ವೃತ್ತಿ-ಶಬ್ದ ವ್ಯಾಪಾರ) ಇವುಗಳ ಪರಿವಿಡಿಗೂ ಮೀರಿರುವುದು ಧ್ವನಿ, ವ್ಯಂಜನ, ಅಂಜನ, ಧ್ವನನ. ಆದ್ದರಿಂದಲೇ ಅನಂದವರ್ಧನ, ಅಭಿನವಗುಪ್ತ, ಮಮ್ಮಟಾದಿಗಳು ಈ ಧ್ವನಿಯನ್ನು ಅಲೌಕಿಕ ವ್ಯಾಪಾರವೆಂದು ಕರೆದಿರುವರು. ಈ ಧ್ವನಿಯನ್ನು ಆನಂದವರ್ಧನನೇ ಮೊಟ್ಟಮೊದಲು ಕಂಡು ಹಿಡಿದಿದ್ದಲ್ಲ. ಆತನೇ ತಿಳಿಸುವಂತೆ ಇದು ವೈಯಾಕರಣಿಗಳ ಸ್ಫೋಟಸಿದ್ಧಾಂತ ತತ್ತ್ವದ ಆಧಾರದ ಮೇಲೆ ರೂಪಿಸಲ್ಪಟ್ಟಿದೆ. ಸ್ಫೋಟ ಎಂದರೆ ಒಂದು ರೀತಿಯ ಅಲೌಕಿಕ ಶಕ್ತಿ ಶಬ್ದದಲ್ಲಿ ಅವಿನಾಭೂತವಾಗಿ ಅಡಗಿದೆ. ಈ ಶಕ್ತಿಯಿಂದ ಶಬ್ದವು ಪ್ರಕಾಶವಾಗುವುದಲ್ಲದೆ ವಿಕಾಸ ಅಥವಾ ಉತ್ಪನ್ನವಾಗುವುದಿಲ್ಲ. ಈ ಸ್ಫೋಟಶಕ್ತಿ ಬ್ರಹ್ಮನಂತೆ ಇದ್ದು ಕಾರಣಾಂತರದಿಂದ ಪ್ರಕಾಶವಾಗುವುದು. ಒಂದು ರೀತಿಯಲ್ಲಿ ಇದನ್ನು ವಿಕಾಸ ಎಂದರೂ ಎನ್ನಬಹುದು. ಆದರೆ ಕಾರಣದಿಂದ ಕಾರ್ಯಬರುವಂತೆ ಶಬ್ದ ಸಾಮಾನ್ಯದಿಂದ ಧ್ವನಿ ಸಾಮಾನ್ಯ ಬರುವುದಿಲ್ಲ. ಧ್ವನಿ ವ್ಯಕ್ತವಾಗಲು ಅದನ್ನು ಕಾವ್ಯದಲ್ಲಿ ಅಡಗಿಸುವ ಮಹಾಕವಿಯೂ ಬೇಕು. ಅದನ್ನು ಗ್ರಹಿಸುವ ರಸಿಕ ಸಹೃದಯನೂ ಬೇಕು. ಅದರ ಪ್ರಕರಣಾದಿಗಳ ಸಹಕಾರವಿದ್ದರೆ ಇದು ಬಹುಸುಲಭವಾಗಿ ವ್ಯಕ್ತವಾಗುವುದು. ಮುಖ್ಯ ಮತ್ತು ಗುಣ ವ್ಯಾಪಾರಗಳೇ ಸಾಕು, ಇದು ಬೇಡವೆಂದು ಮೀಮಾಂಸಕರು ನ್ಯಾಯವೈಶೇಷಕರು ಹೇಳುವರು. ಆದರೆ ಅವರು ಧ್ವನಿಯನ್ನು ವಿರೋಧಿಸುವುದು ತತ್ತ್ವಶಃ ಅಲ್ಲ ಸಿದ್ಧಾಂತಕ್ಕೆ ಕಟ್ಟುಬಿದ್ದು ಭರತನ ವಿಭಾವಾನುಭಾವ ವ್ಯಭಿಚಾರಾದ್ರಸ ನಿಷ್ಪತ್ತಿ ಎಂಬಲ್ಲಿನ ನಿಷ್ಪತ್ತಿ ಃ ಸಂಯೋಗಾತ್ ಈ ಮಾತುಗಳು ಅಸ್ಪಷ್ಟವಾಗಿ ಎಲ್ಲರೂ ಅವರವರಿಗೆ ತಕ್ಕಂತೆ ಅರ್ಥಮಾಡಿಕೊಳ್ಳುತ್ತಾರೆ. ಅಲಂಕಾರಿಕರ ಈ ಮಾತುಗಳಿಗೆ ಧ್ವನಿಮಾರ್ಗ ಅನುಸಾರ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ಧ್ವನಿ ಉಳಿದ ಶಬ್ದ ವ್ಯಾಪಾರಗಳಿಗಿಂತ ಮಿಗಿಲಾದದ್ದು. ಮೀರಿರುವ ಚಿತ್ತವೃತ್ತರಸಾಸ್ವಾದನೆಗೆ ಅಥವಾ ಚರ್ವಣಕ್ಕೆ ಈ ಧ್ವನಿ ಅತ್ಯವಶ್ಯಕ. 

	ಆಲಂಕಾರಿಕ ಮತ್ತು ಅವರ ಕೃತಿಗಳ ವಿಹಂಗಮ ನೋಟ ಇಲ್ಲಿ ಸಾಧ್ಯವಿಲ್ಲ. ಸಂಕ್ಷಿಪ್ತ ಪರಿಚಯ ಮಾಡಲಾಗಿದೆ. 

	ಭಾಮಹ: ಸು.6-7ನೆಯ ಶತಮಾನ. ಕಾವ್ಯಾಲಂಕಾರದ ಕರ್ತೃ. ಎಲ್ಲ ಅಲಂಕಾರಿಕರೂ ಕಾವ್ಯ ಲಕ್ಷಣ, ಶಬ್ದಾರ್ಥಗಳ ಗುಣದೋಷಗಳು, ವೃತ್ತಿಪ್ರವೃತ್ತಿಗಳು (ಶೈಲಿ) ಶಬ್ದಾರ್ಥಲಂಕಾರಗಳು ಇತ್ಯಾದಿ ಕಾವ್ಯದ ಮುಖ್ಯಾಂಗಗಳನ್ನು ವಿವರಿಸಿ ಕಾವ್ಯದ ಕೊನೆಯಲ್ಲಿ ಕಾವ್ಯಕೃತಿಗೆ ಅತ್ಯವಶ್ಯಕವಾಗಿ ಮಾರ್ಗದರ್ಶಕವಾದ ವ್ಯಾಕರಣಾಂಶವನ್ನು ನಮೂದಿಸಿದವನು. ಆರು ಪರಿಚ್ಛೇದದ 400 ಶ್ಲೋಕಗಳಿವೆ ಇಲ್ಲಿ. ಈತನ ಕಾಲಕ್ಕೆ ಮುಂಚಿತವಾಗಿಯೇ ನಾಟಕ ಮೀಮಾಂಸೆಯಂತೆ ಕಾವ್ಯ ಮೀಮಾಂಸೆಯೂ ಪ್ರಾರಂಭವಾಗಿದೆ. ಆದರೆ ಅದನ್ನು ಗ್ರಂಥಸ್ಥವಾಗಿ ಉಳಿಸಿಕೊಂಡು ಬಂದವರಲ್ಲಿ ಭಾಮಹ ಮೊದಲಿಗ. ಈತನನ್ನು ಅಲಂಕಾರ ಸಂಪ್ರದಾಯದವನೆನ್ನುತ್ತಾರೆ. ಈತನನ್ನು ಬೌದ್ಧನೆಂದು ಹೇಳಲು ಕೆಲವರು ಪ್ರಯತ್ನಿಸಿದ್ದಾರೆ.

	ದಂಡಿ: ದಂಡಿ ಭಾಮಹ ಇಬ್ಬರೂ ಬಹು ಹತ್ತಿರದವರು. ಯಾರು  ಮೊದಲು ಯಾರು ಆಮೇಲೆ ಎಂಬ ವಿವಾದ ಇನ್ನೂ ಮುಗಿದಿಲ್ಲ. ದಂಡಿ ಮೂರು ಗ್ರಂಥಗಳನ್ನು ಬರೆದಿರುವನಂತೆ. ಆತನ ಕಾವ್ಯಾದರ್ಶ ಮೊದಲನೆಯದು. ದಶಕುಮಾರ ಚರಿತೆ ಎರಡನೆಯದು. ಮೂರನೆಯದು ಅವಂತಿಸುಂದರೀ ಕಥಾ ಎನ್ನುತ್ತಾರೆ. ಇದು ಸಿದ್ಧಾಂತವಾಗಿಲ್ಲ. ಅಲಂಕಾರಿಕರೆಲ್ಲ ಬಹುಮಟ್ಟಿಗೆ ಕಾಶ್ಮೀರದವರಾದರೆ ಈತ (ದಂಡಿ) ದಕ್ಷಿಣದವನು. ಈತನ ಕಾಲಕ್ಕೆ 35 ಅಲಂಕಾರಗಳು ಮಾತ್ರ ಸ್ವೀಕೃತವಿದ್ದುವು. ದಂಡಿ ವೈಶಿಷ್ಟ್ಯವೆಂದರೆ ಕಾವ್ಯಕ್ಕೆ ಮಾರ್ಗವೇ ಮುಖ್ಯ. ಗುಣಾಲಂಕಾರಗಳು ಎರಡನೆಯದಾಗಿ ಮುಖ್ಯ. ಅಂದರೆ ಮಾರ್ಗ ಗುಣಾಲಂಕಾರವಾದಿ ಇವನು. ಈತ ಗುಣ ಸಂಪ್ರದಾಯದ ಕವಿ ಹಾಗೂ ಆಲಂಕಾರಿಕನೆಂದು ಪ್ರಸಿದ್ಧಿ ಪಡೆದಿದ್ದಾನೆ. ಭಾಮಹನಿಗಿಂತ ದಂಡಿಯ ಶೈಲಿ ಲಲಿತ ಈತನ ಲಕ್ಷಣಕ್ಕೆ ಉದಾಹರಣೆಗಳೆಲ್ಲ ಸ್ವಂತವಾದುವು. ಭಾಮಹನ ಪಾಂಡಿತ್ಯ, ದಂಡಿಯ ಲಾಲಿತ್ಯ ಅವರ ಕಾಲಕ್ಕೆ (7-8ನೆಯ ಶತಮಾನ) ವಿಚಿತ್ರ ವಿಶಿಷ್ಟ ಕಳೆಕೊಟ್ಟಿದೆ. ದಂಡಿ ಭಾಮಹನಂತೆ ಕಾವ್ಯ ವಿಸ್ತರಿಸಿದರೂ ಶಬ್ದಾಲಂಕಾರಕ್ಕೆ ಹೆಚ್ಚು ಗಮನ ಕೊಟ್ಟಿದ್ದಾನೆ.

	ಉದ್ಭಟ: ಸು. 8ನೆಯ ಶತಮಾನ. ಈತ ಕಾವ್ಯಾಲಂಕಾರ ಸಾರ ಸಂಗ್ರಹ ಎಂಬ ಅಲಂಕಾರ ಶಾಸ್ತ್ರಗ್ರಂಥವನ್ನು ಬರೆದಿದ್ದಾನೆ. ಈತನ ಕಾವ್ಯಕ್ಕೆ ಪ್ರತೀಹಾರ ಎಂಬ ರಾಜ ವ್ಯಾಖ್ಯಾನ ಬರೆದಿದ್ದಾನೆ. ಇವನು ಕುಮಾರಸಂಭವವೆಂಬ ರಸವತ್ತಾದ ಕಾವ್ಯವೊಂದನ್ನು ಬರೆದಿದ್ದಾನೆ. ಆದರೆ ಈತ ನಾಟ್ಯಶಾಸ್ತ್ರ ಮತ್ತು ಭಾಮಹನ ಕಾವ್ಯಲಂಕಾರಕ್ಕೆ ಬರೆದಿರುವನೆಂದು ಹೇಳಲಾದ ವ್ಯಾಖ್ಯಾನಗಳು ದೊರೆತಿಲ್ಲ. ಅಲಂಕಾರಸಾರಸಂಗ್ರಹ 6 ವರ್ಗಗಳಲ್ಲಿದೆ. 41 ಅಲಂಕಾರಗಳನ್ನು ವಿಂಗಡಿಸಿದ್ದಾನೆ. ಹಿಂದಿನವರು ಒಪ್ಪಿರುವ ಕೆಲವು ಅಲಂಕಾರಗಳನ್ನು ಅನಂತರದವರು ಬಿಡುವುದು ಹಿಂದಿಲ್ಲದವನ್ನು ಸೇರಿಸುವುದು ವಾಡಿಕೆ. ಈ ಅಲಂಕಾರಗಳು ಅಪ್ಪಯ್ಯ ದೀಕ್ಷಿತರ ಕುವಲಯಾನಂದದಲ್ಲಿ (17ನೆಯ ಶತಮಾನ) ನೂರಕ್ಕೂ ಹೆಚ್ಚಾಗಿವೆ. ಅಲಂಕಾರವೇ ಕಾವ್ಯಪ್ರಧಾನವೆಂಬ ಸಂಪ್ರದಾಯಕ್ಕೆ ಉದ್ಭಟ ಸೇರಿದ್ದರೂ ಸಹ ಈತನ ಅನುಯಾಯಿಗಳು ಈತನನ್ನು ಬಹಳ ಗೌರವದಿಂದ ಕಾಣುತ್ತಾರೆ.

	ವಾಮನ: ಸು.850. ವಾಮನ ತನ್ನ ಕಾವ್ಯಾಲಂಕಾರ ಸೂತ್ರವೃತ್ತಿಯನ್ನು ಐದು ಅಧಿಕರಣಗಳಾಗಿ ಮಾಡಿದ್ದಾನೆ. ಸೂತ್ರರೂಪದಲ್ಲಿ ಕಾವ್ಯಾನುಶಾಸನವಿದೆ. ಅದಕ್ಕೆ ತನ್ನದೇ ಆದ ವೃತ್ತಿಯನ್ನು ಬರೆದಿದ್ದಾನೆ. 319 ಸೂತ್ರಗಳು 12 ಅಧ್ಯಾಯದಲ್ಲಿ ಅಡಗಿದೆ. ಎಂದಿನಂತೆ ಕಾವ್ಯ ಲಕ್ಷಣ, ಗುಣ ದೋಷ, ಕವಿವಿಮರ್ಶೆ, ಶಬ್ದಾರ್ಥಾಲಂಕಾರಗಳು, ಕಾವ್ಯದೋಷ, ಸಹನೆ ಮತ್ತು ವ್ಯಾಕರಣಭಾಗ ಇವೇ ಈ ಕಾವ್ಯದ ಸಾಮಾನ್ಯಧಾಟಿ. ರೀತಿರಾತ್ಮಾಕಾವ್ಯಸ್ಯ ಎಂದು ವಾಮನ  ಹೇಳಿದ್ದರಿಂದ ಈತನನ್ನು ರೀತಿ ಸಂಪ್ರದಾಯದವನೆಂದು ಕರೆಯುತ್ತಾರೆ. ಅಲ್ಲದೆ ಗುಣ ಮತ್ತು ಅಲಂಕಾರಕ್ಕೆ ವ್ಯತ್ಯಾಸ ಹೇಳಿದ್ದಾನೆ. ಕಾವ್ಯಶೋಭಾಯಾಃ ಕರ್ತರೋ ಧರ್ಮಾ ಗುಣಾಃ, ತದತಿಶಯಿ ಹೇತವಸ್ತ್ರಲಂಕಾರಾ ಃ  ಈ ಮಾತನ್ನು ಮಮ್ಮಟ ಟೀಕಿಸಿ ತ್ಯಜಿಸಿದ್ದಾನೆ. ಕಾವ್ಯಪಾಕವೆಂಬ ಮಾತು ವಾಮನನಿಂದ ಬಂದಿದೆ. ಗೋಪೇಂದ್ರ ತಿಪ್ಪಭೂಪಾಲನ ಕಾಮಧೇನುವೆಂಬ ವ್ಯಾಖ್ಯಾನ, ಮಿಹೇಶ್ವರ ಮತ್ತು ಸಹದೇವ ಇವರ ಸಾಹಿತ್ಯಸರ್ವಸ್ವವೆಂಬ ವ್ಯಾಖ್ಯಾನವೂ ಇವೆ.

	ರುದ್ರಟ: (ಸು. 825-75) ಕಾವ್ಯಾಲಂಕಾರವೇ ಈತನ ಕೃತಿ. ಹೆಸರೇ ಸೂಚಿಸುವಂತೆ ಕಾವ್ಯದ ಅಲಂಕಾರಗಳನ್ನು ಸಂಪ್ರದಾಯದಂತೆ ಈತ ಚರ್ಚಿಸಿದ್ದಾನೆ. ಈತ ಅಲಂಕಾರ ಸಂಪ್ರದಾಯದವನಾದರೂ ರಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾನೆ. ಇಲ್ಲಿಯ ವೈಶಿಷ್ಟ್ಯವೆಂದರೆ ಆಯಾ ತತ್ತ್ವದ ಮೇಲೆ ಆಯಾ ಅಲಂಕಾರಗಳನ್ನು ರೂಪಿಸಿರುವುದು. ಔಪಮ್ಯ, ಅಭೇದ, ಅತಿಶಯ, ಶ್ಲೇಷ ಈ ತತ್ತ್ವಗಳಿಗೆ ಸಂಬಂಧಿಸಿದ ಅಲಂಕಾರ ಭೇದಗಳನ್ನು ಬಿತ್ತರಿಸಿದ್ದಾನೆ. ಸಂಗೀತರತ್ನಾಕರ ಇವನನ್ನು ಸಂಗೀತಾಚಾರ್ಯರೆಂದು ಗೌರವಿಸಿದೆ. ಭಾವಾಲಂಕಾರವನ್ನು ವಿಸ್ತರಿಸುವಾಗ ಧ್ವನಿ ಲಕ್ಷಣ ಮತ್ತು ವ್ಯಾಪ್ತಿಯನ್ನು ಕಾರ್ಯತಃ ಒಪ್ಪಿದ್ದಾನೆ. ಕಾಶ್ಮೀರಕ್ಕೆ ಅಲಂಕಾರ ಪ್ರಣೀತೃಗಳ ವರವ್ರಸಾದವೋ ಎಂಬಂತೆ ಧ್ವನಿಕಾರ ಆನಂದವರ್ಧನನೂ ಸೇರಿ ಎಲ್ಲ ಕಾಶ್ಮೀರದವರು ಧ್ವನಿಕಾರನ ಪೂರ್ವದಲ್ಲಿ ಅವನ ಅನಂತರ ಬಂದ ಲೊಲ್ಲಟ, ಮಮ್ಮಟ, ಇವರು ಅಲಂಕಾರ ಪ್ರಪಂಚದ ಎಲ್ಲ ತತ್ತ್ವಗಳನ್ನೂ ಕ್ರೋಢೀಕರಿಸಿದ್ದಾರೆ. ಇಲ್ಲಿಂದ ಮುಂದೆ ಇನ್ನೂ ಯಾರೂ ಒಂದು ಹೆಜ್ಜೆ ಮುಂದೆ ಇಟ್ಟಿಲ್ಲ.

	ಆನಂದವರ್ಧನ: ಸು. 850. ಅಲಂಕಾರಶಾಸ್ತ್ರದಲ್ಲಿ ಈತ ಒಬ್ಬ ಧ್ರುವತಾರೆ. ಕಾರಣ ಈತ ಧ್ವನಿ ತತ್ತ್ವಕಿತ್ತ ಪ್ರಾಶಸ್ತ್ಯ ಆವರೆಗೆ ಅಸ್ಪಷ್ಟವಾಗಿದ್ದ ಈ ಧ್ವನಿಮಾರ್ಗವನ್ನು ಇವನು ತರ್ಕಬದ್ಧವಾಗಿ ನಿರ್ದೇಶಿಸಿ ನಿರ್ಧರಿಸಿದ. ವೈಯಾಕರಣಿಗಳು ಸ್ಫೋಟಕ ಶಕ್ತಿಯನ್ನು ಶಬ್ದದಲ್ಲಿ ಒಪ್ಪಿ ಅದರಿಂದ ಶಬ್ದ ಅರ್ಥವನ್ನು ಉತ್ಪತ್ತಿ ಮಾಡುವುದಿಲ್ಲ. ಆದರೆ ಶಬ್ದವು  ಅಸ್ಫುಟವಾದ  ಅಥವಾ ಅವ್ಯಕ್ತವಾದ ಅರ್ಥವನ್ನು ವ್ಯಕ್ತಗೊಳಿಸುತ್ತದೆ, ಸ್ಫುಟಪಡಿಸುತ್ತದೆ ಎಂದು ಹೇಳಿದ್ದರು. ಈ ತತ್ತ್ವದ ಆಧಾರದ ಮೇಲೆ ಧ್ವನಿ ತತ್ತ್ವವನ್ನು ರೂಪಿಸಿದ. ಕಾವ್ಯದಲ್ಲಿ ವಿಭಾವಾನುಭಾವ ವ್ಯಭಿಚಾರಿ ಭಾವಗಳಿಂದ ವ್ಯಕ್ತವಾದ ಅರ್ಥ ಕವಿಯ ದೂರಗಾಮಿ ಅಭಿಪ್ರಾಯವನ್ನು ವಾಚಿಸುವುದಿಲ್ಲ. ಆದರೆ ಪ್ರಕರಣಾದಿ ಮಹಿಮೆಯಿಂದ ಶಬ್ದಾರ್ಥವೂ ಗೂಡಾರ್ಥವನ್ನು ವ್ಯಕ್ತಪಡಿಸುತ್ತದೆ. ಕಾವ್ಯಪರಿಪಾಕ ವಿಶೇಷವಾಗಿದ್ದಲ್ಲಿ ಅರ್ಥಪರಿಪಾಕ ವಿಶೇಷವಿರಲೇಬೇಕು. ಹಾಗಿಲ್ಲದಲ್ಲಿ ಹಾಗಿರುವುದೇ ಇಲ್ಲ (ಯಸ್ಸ್ಯೆವಂ ತಸ್ಸ್ಯೆವಂ) ಹಾಗಿದ್ದಲ್ಲಿ  ಹಾಗಿರಲೇಬೇಕು ಇದೇ ಇವನ ವಾದ. ಶಬ್ದಕ್ಕೆ ಸಾಮಾನ್ಯವಾಗಿ ಪ್ರತ್ಯಕ್ಷ ವೃತ್ತಿ ವಾಚಕವೃತ್ತಿ. ಒಂದು ವೇಳೆ ಅದು ಪರೋಕ್ಷ ವೃತ್ತಿ ಅಥವಾ ಲಕ್ಷಣೆಯಿಂದ (ಗೌಣ, ಭಂಗಿ, ಅಲಂಕಾರಿಕ) ಆ ಅರ್ಥಕ್ಕೆ ಲಗತ್ತಿಸಿರುವ ಇನ್ನೊಂದು ಅರ್ಥವನ್ನು ಲಕ್ಷಿಸಬಹುದು. ಆದರೆ ಮುಖ್ಯಾರ್ಥಕ್ಕೆ ಸಂಬಂಧಿಸದೇ ಇದ್ದು ಅತಿ ಚಮತ್ಕಾರಕಾರಿಯಾದ ಮತ್ತೊಂದು ಮನೋಜ್ಞಾಭಿಪ್ರಾಯವನ್ನು ಸೂಚಿಸುವಂತಿದ್ದಲ್ಲಿ ಆಗ ಒಂದು ಅತಿ ಪರೋಕ್ಷ ವೃತ್ತಿ ಅಥವಾ ಧ್ವನಿ, ವ್ಯಂಜನ, ಅಂಜನವೆಂಬ ಶಬ್ದವ್ಯಾಪಾರವನ್ನು ಅಂಗೀಕರಿಸಲೇಬೇ ಕೆಂದು ಆನಂದವರ್ಧನ ಸಯುಕ್ತಿಕವಾಗಿ ಮರ್ಧಿಸಿ ಕಾವ್ಯತತ್ವಸಾಗರ ಮಂಥನದಿಂದ ಈ ಧ್ವನಿ ತತ್ತ್ವನವನೀತವನ್ನು ವಿಮರ್ಶಕರಿಗೆ ಒದಗಿಸಿದ್ದಾನೆ. ಕೇವಲ ನಾಮಶಃ ಕಾರ್ಯರೂಪದಲ್ಲಿದ್ದ ಈ ಧ್ವನಿ ವ್ಯಾಪಾರ ಇವನಿಂದ ನಿರ್ದಿಷ್ಟವಾಗಿ ಪ್ರಖ್ಯಾತಿಗೊಂಡು ಈತನಿಗೆ ಧ್ವನಿಕಾರನೆಂಬ ಕೀರ್ತಿಯನ್ನೊದಗಿಸಿತು. ಈ ಧ್ವನಿ ಮತ್ತು ಅದರ ಪ್ರಭೇದಗಳು ಇವನ ಮಹಿಮಾನ್ವಿತ ಅನುಯಾಯಿಗಳಾದ ಅಭಿನವಗುಪ್ತ, ಮಮ್ಮಟಾದಿಗಳಿಂದ  ಪುಷ್ಟೀಕೃತವಾಗಿ ಇಂದು ಪಾಶ್ಚಾತ್ಯ ಪೌರ್ವಾತ್ಯ ಕಾವ್ಯಲೋಕದ ಕಾವ್ಯಪುರುಷನಾಗಿ, ಕಾವ್ಯಸಂಜೀವಿನಿಯಾಗಿದೆ. ಇವನ ಧ್ವನ್ಯಾಲೋಕ ಲಕ್ಷಣಗ್ರಂಥ ಅಥವಾ ಪ್ರಕರಣ ಗ್ರಂಥಕ್ಕೆ ಇವನಷ್ಟೇ ಗಟ್ಟಿಗನಾದ ಪಂಡಿತಪ್ರಕಾಂಡ ಅಭಿನವಗುಪ್ತನ ಲೋಚನವೆಂಬ ವ್ಯಾಖ್ಯಾನವಿದೆ. ಆನಂದವರ್ಧನನೇ ತನ್ನ ಕಾರಿಕಾರೂಪ  ಗ್ರಂಥಕ್ಕೆ ವೃತ್ತಿ ಬರೆದನೆಂದೂ ಹೇಳುವರು. ಅದು ಆತನದಲ್ಲವೆಂದು ಒಂದು ವಾದ. 4 ಉದ್ಯೋತವಿರುವ ಈ ಗ್ರಂಥ ಹಿಂದಿನ ಎಲ್ಲ ತತ್ವಗಳನ್ನು ಸಮನ್ವಯ ಮಾಡಿ ತರ್ಕಬದ್ಧವಾದ ಧ್ವನಿಮಾರ್ಗವನ್ನು ಸ್ಥಾಪಿಸಿ ಸಾಹಿತ್ಯ ಮೀಮಾಂಸೆಗೆ ಮೆರಗು ಕೊಟ್ಟಂತಿದೆ. ಮಹಿಮಭಟ್ಟನೆಂಬ ತಾರ್ಕಿಕ ಆನಂದವರ್ಧನನ ಧ್ವನಿ ಮತ್ತು ಕುಂತಲ ಅಥವಾ ಕುಂತಕನ ವಕ್ರೋಕ್ತಿ ಎರಡೂ ಅಸಮಂಜಸ, ಅವನ್ನು ಅನುಮಾನ ಪ್ರಮಾಣದಿಂದಲೇ ಗತಾರ್ಥಪಡಿಸಬಹುದೆಂದು ವೃಥಾ ಆಲಾಪಿಸಿ ಮಮ್ಮಟಾದಿಗಳಿಂದ ತಕ್ಕ ಉತ್ತರ ಪಡೆದಿದ್ದಾನೆ. ಅಲಂಕಾರವೇ ಕಾವ್ಯಸರ್ವಸ್ವವೆಂದು ಭಾಮಹಾದಿಗಳಿಂದ ಪ್ರಾರಂಭವಾದ ಕಾವ್ಯಮೀಮಾಂಸೆ ಗುಣ, ರೀತಿ ವಕ್ರೋಕ್ತಿ ಇತ್ಯಾದಿ ಬೆಳೆದು ಧ್ವನಿಯೇ ಕಾವ್ಯಸರ್ವಸ್ವವೆಂದು ಹೇಳಿದೆ. ಎಲ್ಲರೂ ರಸವೇ ಕಾವ್ಯದ ಗುರಿಯೆಂದು ಒಪ್ಪುವರು. ಆದರೆ ಆ ಬ್ರಹ್ಮಾಸ್ವಾದ ಸಹೋದರನಾದ ರಸಕ್ಕೆ ಸರಿಯಾದ ಮಾರ್ಗಯಾವು ದೆಂದಾಗ ವಿಪ್ರತಿಪತ್ತಿ ಅಥವಾ ಮೇಲ್ಕಂಡ ಅಭಿಪ್ರಾಯ ಭೇದ ಕಂಡುಬರುವುದು. ರಸಕ್ಕೆ ಮಾರ್ಗವೇನೆಂಬ  ಬಗ್ಗೆ ಭಿನ್ನಾಭಿಪ್ರಾಯಗಳು ಹಲವು. ಆದರೆ ಅವೆಲ್ಲಾ ಈಗ ಮಾಯವಾಗಿ ಧ್ವನಿಯೇ ಕಾವ್ಯದ ಸಾರಸರ್ವಸ್ವವೆಂಬ ವಾದವಿದೆ.

	ರಾಜಶೇಖರ: ಸು.10ನೆಯ ಶತಮಾನ. ಕಾವ್ಯ ಮೀಮಾಂಸೆ ಈತನ ಒಂದು ಮಹಾಕೃತಿ. ಈತನೇ ಕರ್ಪೂರ ಮಂಜರಿಯೆಂಬ ಪ್ರಾಕೃತ ಸಟ್ಟಕ, ಬಾಲಭಾರತ ಮತ್ತು ಬಾಲರಾಮಾಯಣವೆಂಬ ನಾಟಕಗಳ ಕರ್ತೃ. ಆರ್ಯಾವರ್ತದ ರಾಜ ಮಹೇಂದ್ರಪಾಲ, ಆತನ ಮಗ ಮಹೀಪಾಲ, ಗುರು ರಾಜಶೇಖರ. ಆದ್ದರಿಂದ ಮಹಾರಾಷ್ಟ್ರದಿಂದ ಈತ ಕನ್ಯಾಕುಬ್ಜಕ್ಕೆ ಹೋಗಿರಬೇಕು. ಈತ ಸರ್ವಭಾಷಾಚತುರ. ಈತನ ಕಾವ್ಯಮೀಮಾಂಸೆ ಎಂದಿನಂತೆ ಕಾವ್ಯತತ್ವಗಳ ಸಮಸ್ತವಿಷಯ ಸಂಗ್ರಹವಾಗಿ ಚಾರಿತ್ರಕ ಹಾಗೂ ಪೌರಾಣಿಕ ಛಾಯೆಯಿಂದ ಕೂಡಿದೆ. ಈತನಿಂದ ಅನೇಕ ಕವಿ ವಿಮರ್ಶಕರ ಹೆಸರುಗಳು ಬೆಳಕಿಗೆ ಬಂದಿವೆ.

	ಮುಕುಲಭಟ್ಟನ ಅಭಿಧಾವೃತ್ತಿ ಮಾತೃಕೆ, ಭಟ್ಟತೌತನ ಕಾವ್ಯ ಕೌತುಕ, ಭಟ್ಟನಾಯಕನ ಹೃದಯದರ್ಪಣ (10ನೆಯ ಶತಮಾನ) ಹೇಮಚಂದ್ರನ ಕಾವ್ಯಾನುಶಾಸನ ಇತ್ಯಾದಿ ಗ್ರಂಥಗಳು ಕಾವ್ಯ ಮೀಮಾಂಸೆ ಯಲ್ಲಿ ಮಾನ್ಯವಾದರೂ ಮಿಗಿಲಾಗಿಲ್ಲ. ಹೃದಯ ದರ್ಪಣದಲ್ಲಿ ಭಟ್ಟನಾಯಕ ರಸ ಭೋಜಕ ವೃತ್ತಿಯಿಂದ ಆಸ್ವಾದಿತವಾಗಬಹುದು ಎಂದು ಹೊಸ ವ್ಯಾಪಾರವನ್ನು ಹೇಳಿ ವ್ಯಂಜನೆಯ ಬಹು ಸಮೀಪ ಬಂದಿದ್ದಾನೆ. ಭೋಜನ ಸರಸ್ವತೀ ಕಂಠಾಭರಣ, ವಿಶ್ವನಾಥನ  ಸಾಹಿತ್ಯ ದರ್ಪಣ, ಪಂಡಿತ ಜಗನ್ನಾಥನ ರಸಗಂಗಾಧರ ಇವು ಮಹೋಜ್ಜ್ವಲ ಪ್ರತಿಷ್ಠಾ ಗ್ರಂಥಗಳು. ಮಮ್ಮಟನ ಶೈಲಿಯುಕ್ತಿ ಮಹಿಮೆ ಹಿರಿಯದು. ಜಗನ್ನಾಥನ ಸ್ವಾವಲಂಬನೆ ಮೆಚ್ಚತಕ್ಕದ್ದು. ಈವರೆಗೆ ವ್ಯಾಕರಣಕ್ಕೆ ಗಮನ ಕೊಟ್ಟು ಕಾವ್ಯ ತತ್ವ ಪ್ರತಿಪಾದಿಸುತ್ತಿದ್ದವರು ಅದನ್ನು ಬಿಟ್ಟು ನಾಟಕ ತತ್ತ್ವಕ್ಕೂ ಗಮನಹರಿಸಿದರು. ಇದು ವಿಶ್ವನಾಥ, ಧನಂಜಯ, ಧನಿಕ ಇವರಲ್ಲಿ ಕಂಡು ಬರುವುದು.

	ಮಮ್ಮಟ: ಸು. 12ನೆಯ ಶತಮಾನ. ಆನಂಧವರ್ಧನನನ್ನು ಬಿಟ್ಟರೆ ಗಣ್ಯ ವಿಮರ್ಶಕ. ಈತನ ಕಾವ್ಯಪ್ರಕಾಶ ಹತ್ತು ಅಧ್ಯಾಯಗಳಲ್ಲಿ(ಉಲ್ಲಾಸ) ಪ್ರಣೀತವಾಗಿದೆ. (1) ಕಾವ್ಯ ಪ್ರಯೋಜನ, ಕಾರಣ ಮತ್ತು ಸ್ವರೂಪ, (2) ಶಬ್ದಾರ್ಥ ಸ್ವರೂಪನಿರ್ಣಯ, (3) ಅರ್ಥವ್ಯಂಜಕತ್ತ್ವ, (4) ಧ್ವನಿನಿರ್ಣಯ, (5) ಗುಣೀಭೂತ ವ್ಯಂಗ್ಯ, ಸಂಕೀರ್ಣ ಭೇದ ನಿರ್ಣಯ, (6) ಅಧಮಕಾವ್ಯ ನಿರೂಪಣೆ, (7) ದೋಷದರ್ಶನ, (8) ಗುಣನಿರ್ಣಯ, (9) ಶಬ್ದಾಲಂಕಾರ ನಿರ್ಣಯ, (10) ಅರ್ಥಾಲಂಕಾರ ನಿರ್ಣಯ -  ಹೀಗೆ ಕಾವ್ಯ ಹಾಗೂ ಕಾವ್ಯದ ಉಸಿರಾದ ವ್ಯಂಜನೆ (ಧ್ವನಿ) ಇದಕ್ಕೆ  ಪ್ರತ್ಯೇಕ ವಿಮರ್ಶೆಮಾಡಿ ಗಂಭೀರವೂ ಗಹನವೂ ಆದ ಶೈಲಿಯಲ್ಲಿ ತತ್ತ್ವ ಮತ್ತು ತತ್ತ್ವಸಮನ್ವಯ ಎರಡನ್ನೂ ಇಷ್ಟು ಸಮರ್ಪಕವಾಗಿ ಸಮರ್ಥಿಸಿರುವ ಸಕಲ ಶಾಸ್ತ್ರ ಪಾರಂಗತ ವಿಮರ್ಶಕ ಮಮ್ಮಟನಿಗಿಂತ ಬೇರೆ ಇಲ್ಲ. ಇದಕ್ಕಾಗಿ ಮಮ್ಮಟನ ಕಾವ್ಯಪ್ರಕಾಶಕ್ಕಿರುವಷ್ಟು ವ್ಯಾಖ್ಯಾನಗಳು (33) ಇನ್ನಾವ ಗ್ರಂಥಕ್ಕೂ ಇಲ್ಲ. ವ್ಯಾಖ್ಯಾನ ಬರೆದವರಿಗೆ ಭಟ್ಟನೆಂಬ ಬಿರುದು ಬರುತ್ತಿತ್ತೆಂದು ವದಂತಿ. ಮಮ್ಮಟನಂಥ ಅನುಯಾಯಿಗಳಿಂದ ಆನಂದವರ್ಧನನ ಧ್ವನಿ ನಿರ್ಣಯಕ್ಕೂ ಇದ್ದಿರಬಹುದಾದ ಧ್ವನಿತತ್ತ್ವ ಪ್ರತಿಪಂಥಿಗಳು ಕಡಿಮೆಯಾದರು. 

	ಧನಂಜಯ ಮತ್ತು ಧನಿಕ: ಧನಂಜಯನ ದಶರೂಪಕ (ಸು.10ನೆಯ ಶತಮಾನದ ಅಂತ್ಯಭಾಗ) ಹತ್ತು ರೀತಿಯ ನಾಟಕಗಳಿಗೆ ಲಕ್ಷಣ ಮತ್ತು ಲಕ್ಷ್ಯ ಸಮನ್ವಯಕ್ಕಾಗಿ ಮೀಸಲಾಗಿರುವ ನಾಟ್ಯಗ್ರಂಥ. ಇದಕ್ಕೆ ಇವನ ತಮ್ಮನೆನ್ನಬಹುದಾದ ಧನಿಕನ ಅವಲೋಕವೆಂಬ ವ್ಯಾಖ್ಯಾನ ವುಂಟು. ಕಾರಿಕಾ ರೂಪದಲ್ಲಿ ಭರತನಾಟ್ಯದ ಲಕ್ಷಣಗಳನ್ನೇ ಸ್ವಲ್ಪ ಪರಿವರ್ತನೆ ಮಾಡಿ ಧನಂಜಯ ದಶವಿಧ ರೂಪಕಗಳನ್ನು ಅವುಗಳ ಸಾಂಪ್ರದಾಯಿಕ ಪ್ರಯೋಗಧಾಟಿಯನ್ನು ಸ್ವಂತ ಕಾರಿಕೆಗಳಲ್ಲಿ ಬರೆದಿದ್ದಾನೆ. (1) ನಾಟಕ, (2) ಪ್ರಕರಣ, (3) ಭಾಣ, (4) ಪ್ರಹಸನ, (5) ಡಿಮ, (6) ವ್ಯಾಯೋಗ, (7) ಸಮವಾಕ, (8) ವೀಥಿ, (9) ಅಂತ, (10) ಈಹಾಮೃಗ. ನಾಯಕ ನಾಯಕಿಯರು ಧೀರೋದ್ಧತರೇ, ಧೀರೋದಾತ್ತರೇ, ಧೀರಲಲಿತರೇ?  ಬ್ರಾಹ್ಮಣರೇ, ವೈಶ್ಯರೇ ಉಪನಾಯಕ, ಪತಾಕಾಸಾಯಕ, ಪೀಠಮರ್ದಕ ಇತ್ಯಾದಿಗಳ ಸ್ಥಾನವೇನು?  ಈ ಹತ್ತಾರು ಅಂಶಗಳಿಂದ ರೂಪಕಗಳನ್ನು ಹತ್ತು ವಿಧವಾಗಿ ವಿಂಗಡಿಸಿದ್ದಾರೆ. ಈ ಪದ್ಧತಿ ಯುಗಧರ್ಮವನ್ನವಲಂಬಿಸಿದೆಯೇ ಅಥವಾ ಕಾಲ್ಪನಿಕ ಸಂಪ್ರದಾಯವೇ ಹೇಳುವುದು ಕಷ್ಟ. ಅಭಿಪ್ರಾಯವೇನೇ ಇರಲಿ ಈ ಗ್ರಂಥ ಸಂಸ್ಕøತ ನಾಟಕ ವಿಶ್ಲೇಷಣೆಗೆ ಕೈಗನ್ನಡಿ. ಇಲ್ಲಿ ನಾಟಕ ಹಾಗೂ ಪ್ರಕರಣಗಳೇ ಹೆಚ್ಚು. ಇಲ್ಲಿ ಕಾವ್ಯ ಸಂಗತಿಗಳು ಹೆಚ್ಚು ಬೆಳೆದಿಲ್ಲವಾದರೂ ಧನಂಜಯ ರಸ ನಿರೂಪಣೆಗೆ ಒಂದು ಅಧ್ಯಾಯವನ್ನು ಮೀಸಲಾಗಿಟ್ಟು ಸಂಪ್ರದಾಯ ವಿರುದ್ಧವಾಗಿ ಒಂದು ಅಭಿಪ್ರಾಯ ಕೊಟ್ಟಿದ್ದಾನೆ. ಈತನ ಅಭಿಪ್ರಾಯದಂತೆ ರಸ ವಾಚ್ಯ (ತಾತ್ಪರ್ಯ ವೃತ್ತಿಯಿಂದ ತಿಳಿಯಬಹುದು). ಈ ಮಾತು ವೈಯ್ಯಾಕರಣಿಗಳಲ್ಲೂ ಉಂಟು. ಏಕೆಂದರೆ ಅವರು ವಾಚಕತ್ವಕ್ಕೆ ಹೆಚ್ಚು ಮಹತ್ತ್ವ ಕೊಡುವರು. ದ್ಯೋತಕತ್ವ ಕೆಲವು ಸನ್ನಿವೇಶದಲ್ಲಿ ಮಾತ್ರ. ಧನಿಕನ ಮಾತಿನಲ್ಲಿ ಧನಂಜಯನ ಭವ್ಯನಾಯಕನಂತೆ ರಸಕ್ಕೆ ವ್ಯಂಗ್ಯ, ವ್ಯಂಜಕತ್ವ ಬೇಕಿಲ್ಲ. ಭೋಜ್ಯ ಭೋಜಕತ್ವದಿಂದ ಅದನ್ನು ಸವಿಯ ಬಹುದು. ಇನ್ನೊಂದು ವಿಶೇಷವೇನೆಂದರೆ ದಶರೂಪಕ ಶಾಂತರಸವನ್ನು, ಅದರ ಸ್ಥಾಯೀ ಶಮವನ್ನು ಒಪ್ಪುವುದಿಲ್ಲ.

	ಭೋಜ : (ಸು. 1000) ಸರಸ್ವತೀ ಕಂಠಾಭರಣ ಮತ್ತು ಶೃಂಗಾರ ಪ್ರಕಾಶಗಳು ಈತನ ಅಲಂಕಾರ ಗ್ರಂಥಗಳು. ಉಳಿದ ಅನೇಕೃತಿಗಳು  ಈತನ ಗ್ರಂಥಗಳು ಅತಿವಿಸ್ತಾರ. ವಿಷಯ ಮಾತ್ರ ಎಂದಿನಂತೆ ಕಾವ್ಯಾಂಗ ವಿಮರ್ಶೆ. ಹಿರಿಯ ಪಂಕ್ತಿಗೆ ಸೇರಿದ ಈತ ಕ್ಷೇಮೇಂದ್ರನಂತೆಯಾದರೂ ಕ್ಷೇಮೇಂದ್ರನ ಗ್ರಂಥಗಳಂತೆ (ಔಚಿತ್ಯ ವಿಚಾರ ಚರ್ಚಾ ಮತ್ತು ಕವಿ ಕಂಠಾಭರಣ) ಕಾವ್ಯ ಶರೀರ, ಆತ್ಮ ಇವನ್ನು ಹೆಚ್ಚು ಕಡಿಮೆ ಹೇಳಿದ್ದಾನೆ.

	ಕ್ಷೇಮೇಂದ್ರನು ಕಾವ್ಯದಲ್ಲಿ ಔಚಿತ್ಯಕ್ಕೆ ಒಂದು ಮಿಗಿಲಾದ ಸ್ಥಾನ ಕೊಟ್ಟಿದ್ದಾನೆ. ಔಚಿತ್ಯ, ಅಲೌಕಿಕ ಚಮತ್ಕಾರ, ಅನಿರ್ವಚನೀಯ ಈ ಶಬ್ದಗಳಿಗೆ ಸೌಂದರ್ಯೋಪಾಸನೆಯಲ್ಲಿ ಮನೋವಾಗೀಂದ್ರಿಯಗೋಚರ ವಾದ ಒಂದು ಹಂತವಿದೆ. ಅದನ್ನು ಮನಗಂಡು ಮನದಣಿಸುವುದಕ್ಕೆ (ವಿಚ್ಛಿಕ್ತಿ ವಿಶೇಷ) ಸೂಕ್ಷ್ಮದರ್ಶನ ಬೇಕು. ಇದು ಮನಸ್ಸಿನ ಮೂರು ಹಂತಗಳಿಗಿಂತ ನಾಲ್ಕನೆಯ ಅನುಭವ ಹಂತ ಬೇಕು (ತುರೀಯಾ ಪ್ರತಿಪತ್ತಿ ಅಥವಾ ವೃತ್ತಿ). ಬ್ರಹ್ಮಸಾಕ್ಷಾತ್ಕಾರಕ್ಕೆ ಇದೇ ಮನೋವೃತ್ತಿ ಬೇಕೆನ್ನುವರು. ಈ ತುರೀಯಾವೃತ್ತಿ ಅಭಿನವ ಧ್ವನ್ಯಾಲೋಕ ಲೋಚನದಲ್ಲಿ ಬರುವ ಮಾತನ್ನು ಮಮ್ಮಟಾದಿಗಳೂ ವರ್ಣಿಸಿದ್ದಾರೆ. ಈ ಅಲಂಕಾರ ಸಂಪ್ರದಾಯವನ್ನೇ ರುಯ್ಯಕ, ಹೇಮಚಂದ್ರ, ವಿದ್ಯಾನಾಥ, ವಾಗ್ಭಟ, ವಿಶ್ವನಾಥ, ಭಾನುದತ್ತ ಮೊದಲಾದವರು ಅನುಸರಿಸಿದ್ದಾರೆ. ಜಯದೇವನ ಚಂದ್ರಾಲೋಕ ಕೇವಲ ಅಲಂಕಾರಕ್ಕೆ ಮೀಸಲು.	
		
						(ಜಿ.ಎಮ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ